ಚಿಕ್ಕಮಗಳೂರು: ಬಾತುಕೋಳಿ ಹಿಡಿಯುವುದಕ್ಕೆ ಹೋದ ನಾಲ್ವರು ಮಕ್ಕಳು ಕೆರೆಯಲ್ಲಿ ಮುಳುಗಿ ಮೃತಪಟ್ಟ ಧಾರುಣ ಘಟನೆ ಚಿಕ್ಕಮಗಳೂರು ತಾಲೂಕಿನ ಅರಳುಗುಪ್ಪೆ ಗ್ರಾಮದ ಕಾರಂಜಿ ಕೆರೆಯಲ್ಲಿ ನಡೆದಿದೆ.
ಅರಳುಗುಪ್ಪೆ ಗ್ರಾಮದ ಅಬ್ದುಲ್ ರೆಹಮಾನ್ (13), ನಾಯಜ್ (12), ಶಿವಮೊಗ್ಗದ ಮೈದಿಹಾ (9), ಅರಮಾನ್ (8) ಮೃತಪಟ್ಟ ಮಕ್ಕಳು. ಅರಳುಗುಪ್ಪೆಯ 4 ವರ್ಷದ ಅರ್ಮನ್ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆಗಾಗಿ ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ರಜೆಯಲ್ಲಿಸಂಬಂಧಿಕರ ಮನೆಗೆ ಬಂದಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ತಾವು ಆಟವಾಡುತ್ತಿರುವಾಗ ತಮ್ಮೊಂದಿಗಿದ್ದ ಬಾತುಕೋಳಿ ನೀರಿಗಿಳಿದಿದ್ದು ಅದನ್ನು ಹಿಡಿಯಲು ಹೋದ ವೇಳೆ ಮಕ್ಕಳು ಒಬ್ಬರ ಹಿಂದೊಬ್ಬರಂತೆ ನೀರಿಗಿಳಿದು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಶಾಸಕ ಎಚ್.ಡಿ.ತಮ್ಮಯ್ಯ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಮಗುವಿನ ಆರೋಗ್ಯ ವಿಚಾರಿಸಿದರಲ್ಲದೆ ಮೃತ ಮಕ್ಕಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ವೇಳೆ ಮಾತನಾಡಿದ ಶಾಸಕ ಎಚ್.ಡಿ.ತಮ್ಮಯ್ಯ, ಇಂಥ ಘಟನೆಗಳು ನಡೆಯಬಾರದು. ಮೃತ ಮಕ್ಕಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳುತ್ತೇವೆ. ಎಷ್ಟೇ ಪರಿಹಾರ ನೀಡಬಹುದು ಆದರೆ ಮಕ್ಕಳನ್ನು ಮರಳಿ ಕೊಡಲು ಸಾಧ್ಯವಿಲ್ಲ. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರ ವಹಿಸಲು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ ಎಂದರು.
