ಚಿಕ್ಕಮಗಳೂರು: ಹೆಚ್ಚಿನ ಲಾಭ ಹಾಗೂ ರಿಟರ್ನ್ಸ್ ನೀಡುವುದಾಗಿ ಆಮಿಷವೊಡ್ಡಿ ಯುವಕರಿಂದ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪಿಎಸ್ಐ ಮುಷಾಹಿದ್ ಅಹ್ಮದ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಆನ್‌ಲೈನ್ ಬೆಟ್ಟಿಂಗ್, ಮನಿ ಗೇಮಿಂಗ್, ಕ್ಯಾಸಿನೋ, ರಮ್ಮಿ ಹಾಗೂ ಇತರೆ ಜೂಜಾಟದ ಆ್ಯಪ್‌ಗಳ ಮೂಲಕ ಯುವಕರನ್ನು ಸೆಳೆದು ವಂಚಿಸಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದರು.

ಸೋಶಿಯಲ್ ಮೀಡಿಯಾ ಮಾನಿಟರಿಂಗ್, ಸಾರ್ವಜನಿಕರಿಂದ ಲಭ್ಯವಾದ ಮಾಹಿತಿ, ವಾಟ್ಸಾಪ್, ಟೆಲಿಗ್ರಾಂ ಹಾಗೂ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಲಭ್ಯವಾದ ಮಾಹಿತಿಯನ್ನು ಆಧರಿಸಿ ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್‌ಗೆ ಸಂಬಂಧಿಸಿದ ವೆಬ್‌ಸೈಟ್‌ಗಳು ಹಾಗೂ ಯುಆರ್‌ಎಲ್‌ಗಳನ್ನು ಪರಿಶೀಲಿಸಲಾಗಿದೆ.
ಮೊದಲಿಗೆ ಉಚಿತ ಬೋನಸ್, ಹೆಚ್ಚಿನ ಲಾಭ ಹಾಗೂ ಆಕರ್ಷಕ ರಿಟರ್ನ್ಸ್‌ನ ಆಮಿಷವೊಡ್ಡಿ ಕಡಿಮೆ ಮೊತ್ತದ ಹಣ ಹೂಡಿಕೆ ಮಾಡಿಸಲಾಗುತ್ತದೆ. ನಂತರ ಹೆಚ್ಚಿನ ಮೊತ್ತ ಹೂಡಿಕೆ ಮಾಡುವಂತೆ ಪ್ರೇರೇಪಿಸಿ, ಹಣವನ್ನು ಮರಳಿ ನೀಡದೆ ವಂಚಿಸಲಾಗುತ್ತಿದೆ ಎಂಬುದು ಪೊಲೀಸರ ಪರಿಶೀಲನೆಯಲ್ಲಿ ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
