Friday, August 21, 2026
Homeಕ್ರೈಮ್ಹಾಸನ: ಪ್ರೀತಿಸಿ ಮದುವೆಯಾಗಿದ್ದಕ್ಕೆ ಪತಿಯ ಕುಟುಂಬಸ್ಥರಿಂದ ಕಿರುಕುಳ: ಮನನೊಂದು ಮಗುವನ್ನು ಕೊಂದು ಮಹಿಳೆ ಆತ್ಮಹತ್ಯೆ!!

ಹಾಸನ: ಪ್ರೀತಿಸಿ ಮದುವೆಯಾಗಿದ್ದಕ್ಕೆ ಪತಿಯ ಕುಟುಂಬಸ್ಥರಿಂದ ಕಿರುಕುಳ: ಮನನೊಂದು ಮಗುವನ್ನು ಕೊಂದು ಮಹಿಳೆ ಆತ್ಮಹತ್ಯೆ!!

Telegram Group
Join Now

ಹಾಸನ: ಪ್ರೀತಿಸಿ ಮದುವೆಯಾಗಿದ್ದಕ್ಕೆ ಪತಿಯ  ಕುಟುಂಬಸ್ಥರು ಮನೆಯಿಂದ ಹೊರಹಾಕಿ, ನಿರಂತರ ಕಿರುಕುಳ ನೀಡಿದ್ದಕ್ಕೆ ಬೇಸತ್ತು ಮಹಿಳೆಯೊಬ್ಬಳು ಮಗುವನ್ನು ಕೊಂದು ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಆಲೂರಿನ ಹೌಸಿಂಗ್ ಬೋರ್ಡ್‌ನಲ್ಲಿ ನಡೆದಿದೆ. ಮೃತ ಮಗಳು ಹಾಗೂ ಆಕೆಯ ಮಗುವಿನ ಕಣ್ಗಳನ್ನು ಕುಟುಂಬಸ್ಥರು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.

ಅನುಪಮಾ (27) ಹಾಗೂ ಆರ್ಯನ್ (2) ದುರಂತ ಅಂತ್ಯ ಕಂಡವರು. ಮಹಿಳೆಯ ಪತಿ ಶ್ರೀನಿವಾಸ್ ತಾಯಿ ಜಯಮ್ಮ ಹಾಗೂ ಆಕೆಯ ಪುತ್ರಿ ಅನುಶ್ರೀ ಕಿರುಕುಳ ನೀಡುತ್ತಿದ್ದರು ಎಂದು ಅನುಪಮಾ ತಾಯಿ ಆರೋಪಿಸಿದ್ದಾರೆ.

ಆಲೂರು ತಾಲೂಕಿನ ಸಿಂಗಾಪುರ ಗ್ರಾಮದ ಶ್ರೀನಿವಾಸ್ ಹಾಗೂ ಅನುಪಮಾ ಅಕ್ಕಪಕ್ಕದ ಮನೆಯವರಾಗಿದ್ದು, ಎರಡು ಕುಟುಂಬಗಳು ಅನ್ಯೋನ್ಯವಾಗಿದ್ದರು. ಶ್ರೀನಿವಾಸ್ ಹಾಗೂ ಅನುಪಮಾ ಪರಸ್ಪರ ಪ್ರೀತಿಸಿ ಪೋಷಕರ ಮುಂದೆ ಮದುವೆ ಪ್ರಸ್ತಾಪ ಮಾಡಿದಾಗ ಶ್ರೀನಿವಾಸ್ ತಾಯಿ ಜಯಮ್ಮ ಹಾಗೂ ಅಕ್ಕ ಅನುಶ್ರೀ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಅನುಪಮಾ ಮನೆಯವರು ಮದುವೆಗೆ ಒಪ್ಪಿದ್ದು ದೇವಾಲಯದಲ್ಲಿ ಮದುವೆ ಮಾಡಿದ್ದರು.

ಶ್ರೀನಿವಾಸ್ ತಾಯಿ ಜಯಮ್ಮ ಮಗ ಹಾಗೂ ಸೊಸೆಯನ್ನು ಮನೆಗೆ ಸೇರಿಸಿರಲಿಲ್ಲ. ನವದಂಪತಿ ಇಬ್ಬರು ಊರು ತೊರೆದು ಬೆಂಗಳೂರಿನಲ್ಲಿ ನೆಲೆಸಿದ್ದರು. ಶ್ರೀನಿವಾಸ್ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಮದುವೆಯಾದ ನಾಲ್ಕು ವರ್ಷದ ಬಳಿಕ ಗಂಡು ಮಗು ಹುಟ್ಟಿತ್ತು. ಬೆಂಗಳೂರಿನಲ್ಲಿ ದಂಪತಿ ನೆಮ್ಮದಿ ಜೀವನ ನಡೆಸುತ್ತಿದ್ದರೆ ಇತ್ತ ಸಿಂಗಾಪುರ ಗ್ರಾಮದಲ್ಲಿ ಶ್ರೀನಿವಾಸ್ ತಾಯಿ ಜಯಮ್ಮ, ಅನುಪಮಾ ತಾಯಿ ಯಶೋಧ ಜೊತೆ ಮದುವೆ ವಿಚಾರಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಈ ವಿಷಯವನ್ನು ಮಗಳು ಅನುಪಮಾಗೆ ಯಶೋಧ ಹೇಳುತ್ತಿದ್ದರು.

ಶ್ರೀನಿವಾಸ್ ತನ್ನ ಮನೆಗೆ ಹೋಗದಿದ್ದರು ತಾಯಿ ಜಯಮ್ಮ ಹಾಗೂ ಅಕ್ಕ ಅನುಶ್ರೀ ಜೊತೆ ಫೋನ್‌ನಲ್ಲಿ ಮಾತನಾಡುತ್ತಿದ್ದ. ಇದೇ ವಿಚಾರಕ್ಕೆ ಅನುಪಮಾ ಪತಿ ಜೊತೆ ಜಗಳವಾಡುತ್ತಿದ್ದಳು. ನಮ್ಮನ್ನು ನಿಮ್ಮ ತಾಯಿ ಮನೆಗೆ ಸೇರಿಸಿಲ್ಲ. ನೀನು ಕೂಡ ಅವರೊಂದಿಗೆ ಮಾತನಾಡಬಾರದು ಎಂದು ಪತಿ ಜೊತೆ ಜಗಳವಾಡುತ್ತಿದ್ದಳು. ಒಂದು ವೇಳೆ ಮಾತನಾಡಿದರೆ ಸಾಯುತ್ತೇನೆ ಎಂದು ಮಗುವನ್ನು ಎತ್ತಿಕೊಂಡು ತಾಳಿ ಬಿಚ್ಚಿಟ್ಟು ಸಾಯುತ್ತೇನೆ ಎಂದು ಮನೆ ಬಿಟ್ಟು ಹೋಗಿದ್ದರು. ನಂತರ ಅನುಪಮಾ ತಾಯಿ ಯಶೋಧ, ಅಣ್ಣ ಸಂಜು ರಾಜಿ ಸಂಧಾನ ಮಾಡಿ ತಿಳುವಳಿಕೆ ಹೇಳಿದ್ದರು. ಆದರೆ ಅನುಪಮಾ ಮಾತ್ರ ಬದಲಾಗಿರಲಿಲ್ಲ.

ಪತ್ನಿ ವರ್ತನೆಯಿಂದ ಬೇಸತ್ತ ಪತಿ ಶ್ರೀನಿವಾಸ್ ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿದ್ದರು. ಪುನಃ ರಾಜಿ ಸಂಧಾನ ಮಾಡಿದ ಬಳಿಕ ಕಳೆದ ಎರಡು ತಿಂಗಳ ಹಿಂದೆ ಆಲೂರು ಪಟ್ಟಣದ ಹೌಸಿಂಗ್ ಬೋರ್ಡ್‌ಗೆ ಬಂದು ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಅನುಪಮಾ ವಾಸವಿರುವ ಮನೆಯ ಪಕ್ಕದಲ್ಲೇ ಹದಿನೇಳು ಲಕ್ಷ ರೂ. ಕೊಟ್ಟು ಶ್ರೀನಿವಾಸ್ ಸೈಟ್ ಖರೀದಿಸಿ ಮನೆ ಕಟ್ಟಲು ನಿರ್ಧರಿಸಿದ್ದರು. ಆದರೆ ಜಯಮ್ಮ ಮಗ ಶ್ರೀನಿವಾಸ್‌ಗೆ ಫೋನ್ ಮಾಡಿ ಮನೆ ಕಟ್ಟಲು ಒಂದು ಬಿಡಿಗಾಸು ಕೊಡಲ್ಲ. ಆಸ್ತಿಯನ್ನು ಕೊಡುವುದಿಲ್ಲ ಎಂದು ಹೇಳಿ, ಸೊಸೆಯನ್ನು ನಿಂದಿಸಿದ್ದರು.

ಇದರಿಂದ ಅನುಪಮಾ ಪತಿ ಜೊತೆ ಜಗಳವಾಡಿ ಕಳೆದ ಒಂದು ವಾರದ ಹಿಂದೆ ತಾಳಿ ಬಿಚ್ಚಿಟ್ಟು, ಮಗು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದರು. ಮಧ್ಯೆ ಒಂದೆರಡು ಬಾರಿ ಪತಿಗೆ ಕರೆ ಮಾಡಿ ನಾನು ಸಾಯುತ್ತೇನೆ ಎಂದಿದ್ದರು. ಎರಡು ದಿನಗಳ ಹಿಂದೆ ತಾಯಿ ಮನೆಗೆ ಮಗು ಜೊತೆ ಬಂದಿದ್ದರು. ನಿನ್ನೆ ತಮ್ಮ ಮನೆಗೆ ಬಂದು ಮಧ್ಯಾಹ್ನ ಎರಡು ಗಂಟೆ ಸಮಯದಲ್ಲಿ ಪತಿಗೆ ಫೋನ್ ಮಾಡಿ ಸಂಜೆ ಬೇಗ ಮನೆಗೆ ಬಾ ಮಾತನಾಡಬೇಕು ಎಂದು ಹೇಳಿದ್ದರು. ಶ್ರೀನಿವಾಸ್ ಸಂಜೆ ಐದು ಗಂಟೆಗೆ ಮನೆಗೆ ಬಂದಾಗ ಬಾಗಿಲು, ಕಿಟಕಿಗಳು ಎಲ್ಲಾ ಬಂದ್ ಆಗಿದ್ದವು. ಪತ್ನಿಗೆ ಫೋನ್ ಮಾಡಿದರೆ ಮನೆಯೊಳಗೆ ರಿಂಗ್ ಆಗುತ್ತಿತ್ತು. ನಂತರ ಅನುಪಮಾ ಅಣ್ಣ ಸಂಜುಗೆ ಫೋನ್ ವಿಷಯ ತಿಳಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಒಳಗಿನಿಂದ ಹಾಕಿದ್ದ ಬಾಗಿಲು ಲಾಕ್ ಮುರಿದು ಒಳಗೆ ಹೋಗಿ ನೋಡಿದ ವೇಳೆ ಮಗು ಆರ್ಯನನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ನೇಣುಬಿಗಿದುಕೊಂಡು ಅನುಪಮಾ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments