ಹಾಸನ: ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಸಕಲೇಶಪುರ ಪಟ್ಟಣದಲ್ಲಿರುವ ತೋಟಗಾರಿಕೆ ಇಲಾಖೆಯ ಕಚೇರಿ ಕಟ್ಟಡ ಸಂಪೂರ್ಣ ಕುಸಿದು ಬಿದ್ದಿದೆ. ಕಚೇರಿ ಆರಂಭಕ್ಕೂ ಮುನ್ನವೇ ಈ ಘಟನೆ ನಡೆದಿದ್ದು, ಸಂಭವಿಸಬಹುದಾದ ಭಾರಿ ಅನಾಹುತವೊಂದು ತಪ್ಪಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಹಾಗೂ ಬಿರುಗಾಳಿಯಿಂದ ಕಟ್ಟಡ ಈ ಶಿಥಿಲಗೊಂಡಿತ್ತು. ಕಟ್ಟಡದಲ್ಲಿ ಐವರು ಖಾಯಂ ಸಿಬ್ಬಂದಿ ಹಾಗೂ ಇಬ್ಬರು ಹೊರಗುತ್ತಿಗೆ ನೌಕರರು ಕಾರ್ಯ ನಿರ್ವಹಿಸುತ್ತಿದ್ದರು. ಶನಿವಾರ ಕಚೇರಿಗೆ ಟೀ ನೀಡಲು ಬಂದಿದ್ದ ಆದಂ ಎಂಬುವರು ಕಟ್ಟಡ ಕುಸಿಯುವ ಹಂತದಲ್ಲಿದ್ದು, ಅಪಾಯವಿದೆ ಎಂದು ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು.
ಕಚೇರಿ ಆರಂಭವಾಗುವ ಮುನ್ನವೇ ಕಟ್ಟಡ ಕುಸಿದಿರುವುದು ಹಾಗೂ ಟೀ ಅಂಗಡಿಯ ಮಾಲೀಕ ನೀಡಿದ ಮುನ್ನೆಚ್ಚರಿಕೆಯಿಂದ ಇಲ್ಲಿನ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದರಿಂದ ಸಂಭವಿಸಬಹುದಾಗಿದ್ದ ಭಾರಿ ದುರಂತವೊಂದು ತಪ್ಪಿದೆ. ಘಟನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
