ಕೊಟ್ಟಿಗೆಹಾರ: ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರ ಬಹುದಿನಗಳ ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತರುವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು ಅತ್ತಿಗೆರೆ ಹೇಳಿದರು.
ತರುವೆ ಗ್ರಾಮ ಪಂಚಾಯಿತಿಯಲ್ಲಿ ನಿವೇಶನ ರಹಿತರು ಕರೆದ ಸಭೆಯಲ್ಲಿ ಮಾತನಾಡಿದ ಅವರು, ನಿವೇಶನ ರಹಿತರ ಸಮಸ್ಯೆ ಬಹುದಿನಗಳಿಂದ ಬಾಕಿ ಉಳಿದಿದ್ದು, ಅರ್ಹರಿಗೆ ಸರ್ಕಾರದ ನಿಯಮಾನುಸಾರ ನಿವೇಶನ ಕಲ್ಪಿಸಲು ಪಂಚಾಯಿತಿ ವತಿಯಿಂದ ಕ್ರಮ ಕೈಗೊಳ್ಳಲಾಗುವುದು. ಜಂಟಿ ಸರ್ವೆ ನಡೆಸುವುದು ಸೇರಿದಂತೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದರು.
ಸಭೆಯಲ್ಲಿ 40ಕ್ಕೂ ಹೆಚ್ಚು ನಿವೇಶನ ರಹಿತರು ತಮ್ಮ ಸಮಸ್ಯೆಗಳನ್ನು ಪಂಚಾಯಿತಿ ಗಮನಕ್ಕೆ ತಂದರು. ಅರ್ಹ ನಿವೇಶನ ರಹಿತರನ್ನು ಗುರುತಿಸಿ ಜಂಟಿ ಸರ್ವೆ ನಡೆಸಿ ನಿವೇಶನ ಒದಗಿಸಬೇಕು ಎಂದು ಒತ್ತಾಯಿಸಿದರು.
ನಿವೇಶನ ರಹಿತರ ಪರವಾಗಿ ಮಾತನಾಡಿದ ನಿವೇಶನ ರಹಿತೆ ಪೂರ್ಣಿಮಾ, ನಿವೇಶನ ರಹಿತರನ್ನು ಗುರುತಿಸಿ ಈಗಾಗಲೇ ಪಟ್ಟಿಯೊಂದನ್ನು ಸಿದ್ಧಪಡಿಸಲಾಗಿದೆ. ಪಂಚಾಯಿತಿಯಿಂದ ಯಾವುದೇ ನಿವೇಶನ ಪಡೆದಿರದ ಅರ್ಹ ಫಲಾನುಭವಿಗಳ ವಿವರಗಳನ್ನು ಒಳಗೊಂಡಿರುವ ಈ ಪಟ್ಟಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಿ, ಇದೇ ಪಟ್ಟಿಯನ್ನು ಅಂತಿಮ ಪಟ್ಟಿಯಾಗಿ ಪರಿಗಣಿಸಿ ನಿವೇಶನ ಕಲ್ಪಿಸುವ ಪ್ರಕ್ರಿಯೆ ನಡೆಸಬೇಕು ಎಂದು ಮನವಿ ಮಾಡಿದರು.
ನಾವು ಸಿದ್ಧಪಡಿಸಿರುವ ಪಟ್ಟಿಯಲ್ಲಿ ನಿಜವಾದ ನಿವೇಶನ ರಹಿತರ ವಿವರಗಳಿವೆ. ಪಂಚಾಯಿತಿಯಿಂದ ಯಾವುದೇ ನಿವೇಶನ ಪಡೆದಿರದವರನ್ನು ಗುರುತಿಸಲಾಗಿದೆ. ಆದ್ದರಿಂದ ಇದೇ ಪಟ್ಟಿಯನ್ನು ಆಧಾರವಾಗಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಬೇಕು” ಎಂದು ಅವರು ಹೇಳಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಸತೀಶ್ ಗೌಡ ಮಾತನಾಡಿ, ನಿವೇಶನ ರಹಿತರ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚಿಸಿ, ಅರ್ಹರಿಗೆ ನಿವೇಶನ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವ ಕುರಿತು ತೀರ್ಮಾನಿಸಲಾಗುವುದು ಎಂದರು.
ಬಹುದಿನಗಳಿಂದ ಸ್ವಂತ ನಿವೇಶನದ ನಿರೀಕ್ಷೆಯಲ್ಲಿರುವ ಬಡ ಕುಟುಂಬಗಳಿಗೆ ಸರ್ಕಾರದ ನಿಯಮಾನುಸಾರ ನಿವೇಶನ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಸ್ವರೂಪ್ ಪ್ರಶಾಂತ್, ಸದಸ್ಯರಾದ ಸ್ಮಿತಾ, ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಸುಶೀಲಾ ಸೇರಿದಂತೆ 50ಕ್ಕೂ ಹೆಚ್ಚು ನಿವೇಶನ ರಹಿತರು ಉಪಸ್ಥಿತರಿದ್ದರು.
