ಕಳಸ: ಮಲೆನಾಡಿನ ಸೌಂದರ್ಯಕ್ಕೆ ಮಾರುಹೋಗಿ ಆಗಮಿಸುವ ಪ್ರವಾಸಿಗರು ಕೆಲವೊಮ್ಮೆ ಮಾಡುವ ಸಾಹಸಗಳು ಜೀವಕ್ಕೇ ಕಂಟಕವಾಗುತ್ತಿವೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಪ್ರಸಿದ್ಧ ನೇತ್ರಾವತಿ ಪೀಕ್ ಹಾಗೂ ಕುದುರೆಮುಖ ಮಾರ್ಗಮಧ್ಯೆ ಇರುವ ಹಳ್ಳವೊಂದರಲ್ಲಿ ಪ್ರವಾಸಿಗರು ಪ್ರಾಣದ ಹಂಗು ತೊರೆದು ನಡೆಸಿದ ಹುಚ್ಚಾಟ ಈಗ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ಮೈದುಂಬಿ, ರಭಸದಿಂದ ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರವಾಸಿಗರು ಕೇವಲ ಒಂದು ಹಗ್ಗದ ನೆರವಿನಿಂದ ಅಬ್ಬರಿಸುವ ನೀರಿನ ಪ್ರವಾಹವನ್ನು ದಾಟಲು ಸಾಹಸ ಪಟ್ಟಿದ್ದಾರೆ. ನೋಡುವವರ ಎದೆಝಲ್ ಎನಿಸುವಂತಿರುವ ಈ ದೃಶ್ಯಗಳು, ಜಾಗರೂಕತೆಯ ಎಲ್ಲ ಎಲ್ಲೆಗಳನ್ನು ಮೀರಿದ ಹುಚ್ಚುತನದ ಪರಮಾವಧಿಯಂತೆ ಕಾಣಿಸುತ್ತಿವೆ.
ನೀರಿನ ಭೋರ್ಗರೆತಕ್ಕೆ ಸಣ್ಣದಾಗಿ ಕಾಲು ಜಾರಿದರೂ ಸಾಕು, ಕ್ಷಣಾರ್ಧದಲ್ಲಿ ಕೊಚ್ಚಿಹೋಗುವ ಅಪಾಯ ಎದುರಾಗುತ್ತದೆ. ಕೇವಲ ಮೋಜಿಗಾಗಿ ಅಥವಾ ಟ್ರೆಕ್ಕಿಂಗ್ ಉತ್ಸಾಹದಲ್ಲಿ ಇಂತಹ ಅಪಾಯಕಾರಿ ಹಾದಿ ತುಳಿಯುತ್ತಿರುವ ಪ್ರವಾಸಿಗರ ನಡವಳಿಕೆ ಜವಾಬ್ದಾರಿರಹಿತವಾಗಿದೆ. ಒಂದೊಮ್ಮೆ ಹೆಚ್ಚು-ಕಡಿಮೆಯಾಗಿ ಜೀವಹಾನಿ ಸಂಭವಿಸಿದರೆ ಅದಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿ
