ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ ಮನೆಯೇ ಇಲ್ಲದ ವಸತಿ ರಹಿತ ಕುಟುಂಬಗಳು ಸಾವಿರಾರಿವೆ. ಮನೆ ಇದ್ದೂ ಹಕ್ಕುಪತ್ರ ಇಲ್ಲದವರ ಸಂಖ್ಯೆಯೂ ದೊಡ್ಡದಿದೆ. ಜೀವನೋಪಾಯಕ್ಕಾಗಿ ನಲವತ್ತು ಐವತ್ತು ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿದ್ದರೂ, ಆ ಸಣ್ಣ ಜಮೀನಿಗೆ ಹಕ್ಕುಪತ್ರ ಇಲ್ಲದ ಲಕ್ಷಾಂತರ ಕುಟುಂಬಗಳಿವೆ. ಇಂದು ಇವರ ಬದುಕುವ ಹಕ್ಕಿಗೆ ಖಾತರಿಯೇ ಇಲ್ಲವಾಗಿದೆ. ಪರಿಸರ ಸೂಕ್ಷ್ಮ ಪ್ರದೇಶದ ಘೋಷಣೆಯಿಂದ ಇವರಿಗೆ ತೊಂದರೆ ಆಗುವುದಿಲ್ಲ ಎಂದು ಕಾನೂನಿನ ಖಾತರಿ ಕೊಡಲಾಗುತ್ತದೆಯೇ ಎಂದು ಪರಿಸರ ಹೋರಾಟಗಾರರಾದ ನಾಗರಾಜ ಕೂವೆ ಅವರು ಪ್ರಶ್ನಿಸಿದ್ದಾರೆ.
“ಪಶ್ಚಿಮ ಘಟ್ಟದ ರಕ್ಷಣೆಗೆ ಕಸ್ತೂರಿ ರಂಗನ್ ವರದಿ ಬ್ರಹ್ಮಾಸ್ತ್ರ” ಎಂದು ನಂಬಿಕೊಂಡಿರುವ ಪರಿಸರವಾದಿಗಳೇ ಜಾಸ್ತಿ ಇದ್ದಾರೆ. ಅವರನ್ನೆಲ್ಲಾ ಭ್ರಮೆಯಿಂದ ಹೊರಗೆ ತರುವುದು ಬಹಳ ಕಷ್ಟ. ಏಕೆಂದರೆ ಅವರಿಗೆ ಸ್ಥಳೀಯ ಸಮಸ್ಯೆಗಳ ಅರಿವಿಲ್ಲ. ಅದಕ್ಕಿಂತ ಹೆಚ್ಚಾಗಿ, ಅರಿಯುವ ಮನಸ್ಸೂ ಇಲ್ಲ.
ಸ್ಥಳೀಯ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಎಂತಹ ವರದಿ ತಂದರೂ ನಿಷ್ಪ್ರಯೋಜಕ. ಈ ಪರಿಸರ ಸೂಕ್ಷ್ಮ ಪ್ರದೇಶ 20,668 ಚದರ ಕಿಲೋಮೀಟರ್ ನಲ್ಲಿ, ಈಗಾಗಲೇ ಸುಮಾರು 16,000 ಚದರ ಕಿಲೋಮೀಟರ್ ಗೆ ರಕ್ಷಣೆ ಒದಗಿಸಲಾಗಿದೆ(ರಾಷ್ಟ್ರೀಯ ಉದ್ಯಾನವನ, ವನ್ಯಜೀವಿ ಧಾಮ, ಹುಲಿ ಸಂರಕ್ಷಿತ, ಮೀಸಲು ಅರಣ್ಯ ಇತ್ಯಾದಿ). ಉಳಿದ ಸುಮಾರು 4,000 ಚದರ ಕಿಲೋಮೀಟರ್ ಜನವಸತಿ ಜಾಗವನ್ನು, ಅರಣ್ಯದ ಹೆಸರಿನಲ್ಲಿ ಸಂರಕ್ಷಣೆಗಾಗಿ ಸ್ಥಳೀಯರ ಬದುಕುವ ಹಕ್ಕನ್ನೇ ಗಣನೆಗೆ ತೆಗೆದುಕೊಳ್ಳದೇ ಇರುವುದು ಜೀವ ವಿರೋಧಿ ನಿಲುವು. ಸಂವಿಧಾನದ ಮೂಲ ಆಶಯದ ಉಲ್ಲಂಘನೆ.
ಕಸ್ತೂರಿ ರಂಗನ್ ವರದಿ ಯತಾವತ್ತಾಗಿ ಜಾರಿಯಾದರೆ, ವಾಸ್ತವವಾಗಿ ಯಾವ ಸಂರಕ್ಷಣೆಯೂ ಆಗುವುದಿಲ್ಲ. ಉದಾಹರಣೆಗೆ, ಹಿಂದೆಲ್ಲಾ ಪರಿಸರ ಸಂರಕ್ಷಣೆ ಹೆಸರಿನಲ್ಲಿ ಸ್ಥಳೀಯ ನಿವಾಸಿಗಳನ್ನು ಕಾಡುಗಳಿಂದ ಹೊರ ಹಾಕಿದರು. ರಾಷ್ಟ್ರೀಯ ಉದ್ಯಾನವನ, ಹುಲಿ ಸಂರಕ್ಷಿತ, ವನ್ಯಜೀವಿ ಧಾಮ ಬಂತು. ಈಗ ಆ ಜಾಗದಲ್ಲಿಯೇ ಸಫಾರಿ, ಟ್ರೆಕ್ಕಿಂಗ್, ರೆಸಾರ್ಟ್, ಪ್ರವಾಸೋದ್ಯಮ ಬಂದಿದೆ. ಚತುಷ್ಪಥ ಹೆದ್ದಾರಿಗಳು, ರೈಲು ಮಾರ್ಗ, ಸುರಂಗ ಮಾರ್ಗ, ರೂಪ್ ವೇ, ಪಂಪ್ಡ್ ಸ್ಟೋರೇಜ್ ಇತ್ಯಾದಿ ಬೃಹತ್ ಯೋಜನೆಗಳು ಜಾರಿಯಾಗುತ್ತಿದೆ. ಜನರನ್ನು ಹೊರಹಾಕಿ ಎಲ್ಲೆಡೆ ಶ್ರೀಮಂತರು ಮತ್ತು ಮಾಫಿಯಾಗಳ ಅರ್ಭಟ ಕಂಡುಬರುತ್ತಿದೆ. ಇಂತಹವರ ಜೊತೆಗೆ ಪರಿಸರಾಸಕ್ತರು ಸಂರಕ್ಷಣೆಗಾಗಿ ಬಡಿದಾಡಬೇಕಾಗಿದೆ.
ಕಸ್ತೂರಿ ರಂಗನ್ ವರದಿ ಜಾರಿಯಿಂದ ಪರಿಸರ ಸಂರಕ್ಷಣೆ ಆಗುವುದಿಲ್ಲ. ಬದಲಾಗಿ ಕೆಲವರಿಗೆ ಮಾತ್ರ ಬರಪೂರ ಲಾಭ. “ವರದಿ ನಾವೇ ಜಾರಿ ಮಾಡಿಸಿದ್ದು” ಎಂದು ಕೆಲವು NGOಗಳು, ಹೈಟೆಕ್ ಪರಿಸರವಾದಿಗಳು ದೇಶ, ವಿದೇಶ, CSR ನಿಧಿ ಸೇರಿದಂತೆ ಬೇರೆ ಬೇರೆ ಕಡೆ ಹಣ ಎತ್ತಬಹುದು. ಮುಂದೆ, ವಸೂಲಿ ಪರಿಸರವಾದಿಗಳು ಎಲ್ಲದಕ್ಕೂ ಆಕ್ಷೇಪಣೆ ಹಾಕಿ ಕಾಸು ಮಾಡಿಕೊಳ್ಳಬಹುದು. ಅರಣ್ಯ ಇಲಾಖೆ ಮತ್ತು ಆಡಳಿತ ವ್ಯವಸ್ಥೆ ಸ್ಥಳೀಯ ಜನರಿಗೆ ಇನ್ನಷ್ಟು ಮತ್ತಷ್ಟು ಕಿರುಕುಳ ಕೊಡಬಹುದು. ರಾಜಕಾರಣಿಗಳು, ಗುತ್ತಿಗೆದಾರರು ಹೊಸ ಹೊಸ ದಂಧೆ ಶುರುಮಾಡಬಹುದು. ರೆಸಾರ್ಟ್, ಸಫಾರಿ, ಪ್ರವಾಸೋದ್ಯಮ ವಿಪರೀತ ಆಗಬಹುದು. ಎಲ್ಲೆಲ್ಲೂ ರಾಷ್ಟ್ರೀಯ ಹಿತಾಸಕ್ತಿ ಹೆಸರಿನಲ್ಲಿ ಗಣಿಗಾರಿಕೆ ಶುರುವಾಗಬಹುದು. ಸ್ಥಳೀಯರ ಭೂಮಿಯ ಹಕ್ಕು, ವಸತಿಯ ಹಕ್ಕು ಸಮಸ್ಯೆಯನ್ನು ಬಗೆಹರಿಸದೇ ಯತಾವತ್ತಾಗಿ ವರದಿ ಜಾರಿಯಾದರೆ, ನಿಶ್ಚಿತವಾಗಿ ಜನ ಪ್ರತಿಕಾರದ ರೂಪದಲ್ಲಿ ಕಾಡಿಗೆ ಬೆಂಕಿ ಹಚ್ಚಿ ಇನ್ನಷ್ಟು ಪರಿಸರ, ವನ್ಯಜೀವಿ ನಾಶ ಮಾಡುತ್ತಾರೆ. ಸಂರಕ್ಷಣೆ ಪೂರ್ತಿ ಹಳ್ಳ ಹತ್ತುತ್ತದೆ.
ಸ್ಥಳೀಯರನ್ನು ಒಳಗೊಳ್ಳದೇ ಯಾವುದೇ ಸಂರಕ್ಷಣೆ ಸಾಧ್ಯವಿಲ್ಲ. ಜನರಲ್ಲಿ ಕಾಡು ಉಳಿಸಬೇಕು ಎಂಬ ಮನೋಭಾವನೆ ಬೆಳೆಯಬೇಕು. ಪರಿಸರ ಸಂರಕ್ಷಣೆ ಸರ್ಕಾರದ ಆದ್ಯತೆಯ ವಿಷಯವಾಗಬೇಕು. ಇನ್ನಷ್ಟು ಮತ್ತಷ್ಟು ಕಠಿಣ ಕಾನೂನುಗಳಿಂದ ಪ್ರಯೋಜನ ಏನೂ ಇಲ್ಲ. ಈಗಿರುವ ವನ್ಯಜೀವಿ, ಪರಿಸರ ಮತ್ತು ಅರಣ್ಯ ಕಾನೂನುಗಳೇ ಬೇಕಾದಷ್ಟು ಆದವು. ಈಗ ಕಾನೂನಿಗೆ ಬರವಿಲ್ಲ, ಉಳಿಸಬೇಕು ಎಂಬ ಮನೋಭಾವನೆಗೆ ಮಾತ್ರ ಬರವಿದೆ ಅಷ್ಟೇ.
ಎಲ್ಲರ ಭ್ರಮೆ ಕಳಚಲಿ ಎಂದಷ್ಟೇ ಮಲೆನಾಡಿನವನಾಗಿ ನಾನು ಆಶಿಸಬಹುದು. ಪಶ್ಚಿಮ ಘಟ್ಟ ಉಳಿಯಲಿ, ಉಳಿಸುವ ಹೆಸರಿನಲ್ಲಿ ಬಡಜನರ ಬದುಕು ಕಸಿಯದಿರಲಿ ಎಂದು ತಿಳಿಸಿದ್ದಾರೆ.
