ಕೊಪ್ಪ: ರಸ್ತೆ ಅಪಘಾತದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಹಮ್ಮದ್ ರಫೀಕ್ ಎಂಬ 32 ವರ್ಷದ ಯುವಕ ದುರಂತ ಅಂತ್ಯ ಕಂಡಿರುವ ಘಟನೆ ಕೊಪ್ಪ ತಾಲೂಕಿನ ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ
ಹೊನಗೋಡಿನ ದೇವಸ್ಥಾನದ ಬಳಿ ಮೇ 25 ರಂದು ಹರಿಹರಪುರದ ಮತ್ವಾನಿಯಲ್ಲಿರುವ ನಾದಿನಿಯ ಮನೆಗೆ ಸ್ಕೂಟಿಯಲ್ಲಿ ಬಂದಿದ್ದ ರಫೀಕ್, ಮರುದಿನ ಬೆಳಗಿನ ಜಾವ ಶೃಂಗೇರಿಯ ತಮ್ಮ ಮನೆಗೆ ವಾಪಸ್ ಹೊರಟಿದ್ದರು.
ಈ ವೇಳೆ ಹೊನಗೋಡು ರಸ್ತೆಯಲ್ಲಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ಬಂದ ಅಪರಿಚಿತ ವಾಹನವೊಂದು ಇವರ ಸ್ಕೂಟಿಗೆ ಜೋರಾಗಿ ಡಿಕ್ಕಿ ಹೊಡೆದು, ಗಾಯಾಳುವನ್ನು ಉಪಚರಿಸದೆ ಸ್ಥಳದಿಂದ ಪರಾರಿಯಾಗಿದೆ.
ಅಪಘಾತದಿಂದ ತಲೆ ಹಾಗೂ ಕಾಲಿಗೆ ತೀವ್ರ ಪೆಟ್ಟಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ರಫೀಕ್ ಅವರನ್ನು ಆ ಮಾರ್ಗವಾಗಿ ಧರ್ಮಸ್ಥಳಕ್ಕೆ ಸಾಗುತ್ತಿದ್ದ ಸಹೃದಯಿ ಪ್ರವಾಸಿಗರು ಗಮನಿಸಿ, ತಕ್ಷಣ ತಮ್ಮದೇ ವಾಹನದಲ್ಲಿ ಶೃಂಗೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಆದರೆ ಪರಿಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಶೃಂಗೇರಿಯ ಶ್ರೀ ಅಭಿನವ ವಿದ್ಯಾ ತೀರ್ಥ ಆಸ್ಪತ್ರೆಗೆ ತಕ್ಷಣವೇ ಅಂಬುಲೆನ್ಸ್ ಮೂಲಕ ಕರೆದೊಯ್ಯಲಾಯಿತಾದರೂ, ಬೆಳಿಗ್ಗೆ ಸುಮಾರು 6-30 ರ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಕೊನೆಯುಸಿರೆಳೆದಿದ್ದಾರೆ.
ಅಪಘಾತ ಎಸಗಿ ಮಾನವೀಯತೆಯೇ ಇಲ್ಲದೆ ಓಡಿಹೋದ ಅಪರಿಚಿತ ವಾಹನ ಮತ್ತು ಅದರ ಚಾಲಕನ ಪತ್ತೆಗಾಗಿ ತೀವ್ರ ಜಾಲ ಬೀಸಿದ್ದಾರೆ.
