ಕೊಪ್ಪ: ಹಿಟ್ ಅಂಡ್ ರನ್ ಅಪಘಾತ ಪ್ರಕರಣದಲ್ಲಿ ಅಪಘಾತಕ್ಕೆ ಕಾರಣವಾದ ವಾಹನವನ್ನು ಕೇವಲ 36 ಗಂಟೆಗಳೊಳಗೆ ಪತ್ತೆ ಹಚ್ಚುವಲ್ಲಿ ಕೊಪ್ಪ ಪೊಲೀಸ್ ವೃತ್ತ ನಿರೀಕ್ಷಕ ಭರತ್ ಹಾಗೂ ಹರಿಹರಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀಧರ್ ನಾಯ್ಕ ನೇತೃತ್ವದ ತಂಡ ಯಶಸ್ವಿಯಾಗಿದೆ.
ಕೊಪ್ಪ ತಾಲೂಕಿನ ಹೋನಗೋಡು ಸಮೀಪ ಸಂಭವಿಸಿದ್ದ ಹಿಟ್ ಅಂಡ್ ರನ್ ಅಪಘಾತದಲ್ಲಿ ಶೃಂಗೇರಿ ಸಮೀಪದ ಕಲ್ಕಟ್ಟೆ ನಿವಾಸಿ ರಫೀಕ್ (31) ಸ್ಥಳದಲ್ಲೇ ಮೃತಪಟ್ಟಿದ್ದರು. ಮೇ 26ರಂದು ಬೆಳಿಗ್ಗೆ ಸುಮಾರು 6 ಗಂಟೆ ವೇಳೆಗೆ ಹೋನಗೋಡು ಸಮೀಪ ಸ್ಕೂಟಿಯಲ್ಲಿ ಸಂಚರಿಸುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಡಿಕ್ಕಿಯ ತೀವ್ರತೆಗೆ ರಫೀಕ್ ಸಾವನ್ನಪ್ಪಿದ್ದರು.
ಪ್ರಕರಣ ದಾಖಲಿಸಿಕೊಂಡ ಹರಿಹರಪುರ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿ, ವಿವಿಧ ತಾಂತ್ರಿಕ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಅಪಘಾತಕ್ಕೆ ಕಾರಣವಾದ ವಾಹನವನ್ನು ಪತ್ತೆ ಹಚ್ಚಿದ್ದಾರೆ. ಸುಂದರೇಶ್ ಎಂಬುವವರಿಗೆ ಸೇರಿದ ವಾಹನವನ್ನು ವಶಕ್ಕೆ ಪಡೆದು ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಡಿಎಸ್ಪಿ ಬಾಲಾಜಿ ಸಿಂಗ್ ಹಾಗೂ ಕೊಪ್ಪ ಸಿಪಿಐ ಭರತ್ ಅವರ ಮಾರ್ಗದರ್ಶನದಲ್ಲಿ ಹರಿಹರಪುರ ಠಾಣೆಯ ಪಿಎಸ್ಐ ಶ್ರೀಧರ್ ನಾಯಕ್, ವಾಹನ ಚಾಲಕರಾದ ರಾಜು ನಾಯಕ್ ,ಅಂಕಿತ್ ಕೃಷ್ಣ ನಾಯಕ್, ರಾಜೇಶ್ ಪಾಲ್ಗೊಂಡಿದ್ದರು
