ಚಿಕ್ಕಮಗಳೂರು: ಹೊರ ವಲಯದ ಮತ್ತಾವರ ಅರಣ್ಯದಲ್ಲಿ ಒಂಟಿ ಆನೆ ಸೆರೆ ಕಾರ್ಯಾಚರಣೆ 2ನೇ ದಿನಕ್ಕೆ ಕಾಲಿಟ್ಟಿದೆ. ಒಂಟಿ ಸಲಗ ಪದೇಪದೇ ನೆಲೆ ಬದಲಾಯಿಸುತ್ತಿದ್ದು, ಮತ್ತಾವರ ಅರಣ್ಯದಿಂದ ಬೇಲೂರು ಭಾಗದತ್ತ ಪ್ರಯಾಣ ಬೆಳೆಸಿದ ಶಂಕೆ ವ್ಯಕ್ತವಾಗಿದೆ. ರಾತ್ರಿ ಪೂರ್ತಿ ಸಂಚರಿಸಿ ಬೇಲೂರಿನತ್ತ ಹೆಜ್ಜೆ ಹಾಕಿದ ಅನುಮಾನವಿದೆ. ಒಂಟಿ ಆನೆ ಸೆರೆಗೆ ಬಂದಿದ್ದ ಕುಮ್ಕಿ ಆನೆಗಳು ಮತ್ತಾವರ ಕ್ಯಾಂಪ್‌ನಲ್ಲೇ ಬೀಡು ಬಿಟ್ಟಿವೆ.
ಸದ್ಯ ಕಾರ್ಯಾಚರಣೆಗೆ ನೆರವಾಗಲು ಏಕಲವ್ಯ ಆನೆಯನ್ನ ಕರೆಸಲಾಗಿದೆ. ನಿನ್ನೆ ಒಂಟಿ ಸಲಗದ ಆರ್ಭಟಕ್ಕೆ ಬೆದರಿದ ಅಯ್ಯಪ್ಪ & ಅರ್ಜುನ ಆನೆ ಓಟ ಕಿತ್ತಿದ್ದವು. ಹೀಗಾಗಿ ಆಪರೇಷನ್‌ನಲ್ಲಿ ಅರಣ್ಯ ಸಿಬ್ಬಂದಿ ಹೆಚ್ಚಿನ ಎಚ್ಚರಿಕೆ ವಹಿಸಿದ್ದಾರೆ. ಮತ್ತಾವರ ಸುತ್ತಮುತ್ತಲಿ ಗ್ರಾಮದ ಜನರು ಕಾಡಿನತ್ತ ತೆರಳದಂತೆ, ಸಲಗ ಕಾಣಿಸಿದ್ರೆ ತಕ್ಷಣ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ.

ಮತ್ತೊಂದೆಡೆ ಕಾಡಾನೆಗಳ ಹಾವಳಿಯಿಂದ ಬೆಳೆ ನಾಶವಾಗುತ್ತಿದ್ದು, ಜೀವ ಭಯವೂ ಜನರನ್ನು ಕಾಡತೊಡಗಿದೆ. ಹೀಗಾಗಿ ಕಾಡಾನೆಗಳನ್ನ ಓಡಿಸುವಂತೆ ಪಟ್ಟು ಹಿಡಿದಿರುವ ಮಾಕೋನಹಳ್ಳಿ-ನಂದೀಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಗಳು ಬೇಲೂರು-ಮೂಡಿಗೆರೆ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಕಾಡಾನೆಗಳನ್ನ ಮೂಡಿಗೆರೆ ಭಾಗಕ್ಕೆ ಓಡಿಸಿದಕ್ಕೆ ಆಕ್ರೋಶ ವ್ಯಕ್ತಪಡಿಸಿ ಇಂದಿನಿಂದ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿದ್ದಾರೆ.
