ಚಿಕ್ಕಮಗಳೂರು: ಇಲ್ಲಿಗೆ ಸಮೀಪದ ಶಿರವಾಸೆ ಗ್ರಾಮದಲ್ಲಿ ಕುಡಿತದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬರು ಮನೆಗೆ ಬೆಂಕಿ ಹಚ್ಚಿದ ಪರಿಣಾಮ ಮನೆ ಹಾಗೂ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳು ಸುಟ್ಟುಹೋಗಿರುವ ಘಟನೆ ನಡೆದಿದೆ.
ಶಿರುವಾಸೆಯ ಪಟೇಲ್ ನಂಜುಂಡೇಗೌಡ ಅವರ ಪುತ್ರ ಚರಣ ಹಾಗೂ ಅವರ ಪತ್ನಿಯ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ ಎನ್ನಲಾಗಿದೆ. ಈ ವೇಳೆ ಕುಡಿತದ ಅಮಲಿನಲ್ಲಿದ್ದ ಚರಣ ಮನೆಗೆ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.

ಮನೆಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ತೋಟದ ಕೆಲಸಕ್ಕೆ ಬಂದಿದ್ದವರು ಹಾಗೂ ಚರಣ ಅವರ ಪರಿಚಯಸ್ಥರು ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆದರೆ ಕುಡಿತದ ಅಮಲಿನಲ್ಲಿದ್ದ ಚರಣ ಅವರು ಅವರನ್ನು ತಡೆದು ನಿಲ್ಲಿಸಿ, ಆಟಾಟೋಪ ನಡೆಸಿದ ಪರಿಣಾಮ ಬೆಂಕಿ ನಂದಿಸಲು ಸಾಧ್ಯವಾಗದೆ, ಬೆಂಕಿ ಮನೆಯೆಲ್ಲೆಡೆ ವ್ಯಾಪಿಸಿದೆ ಎನ್ನಲಾಗಿದೆ.
ಪರಿಣಾಮವಾಗಿ ಮನೆ, ಪೀಠೋಪಕರಣಗಳು, ದಾಖಲೆ ಪತ್ರಗಳು ಸೇರಿದಂತೆ ಮನೆಯಲ್ಲಿದ್ದ ಹಲವು ಬೆಲೆಬಾಳುವ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಘಟನೆಯಿಂದ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ.
ಘಟನೆಯ ಕುರಿತು ಪೊಲೀಸರು ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
