Tuesday, November 24, 2026
Homeಜಿಲ್ಲಾಸುದ್ದಿಮೂಡಿಗೆರೆ: ಭದ್ರ ಅಭಯಾರಣ್ಯಕ್ಕೆ ಕಾಡಾನೆ ಸ್ಥಳಾಂತರಿಸುವ ಸರ್ಕಾರದ ನಿರ್ಧಾರಕ್ಕೆ ತಾಲೂಕಿನಾದ್ಯಂತ ವಿರೋಧ!

ಮೂಡಿಗೆರೆ: ಭದ್ರ ಅಭಯಾರಣ್ಯಕ್ಕೆ ಕಾಡಾನೆ ಸ್ಥಳಾಂತರಿಸುವ ಸರ್ಕಾರದ ನಿರ್ಧಾರಕ್ಕೆ ತಾಲೂಕಿನಾದ್ಯಂತ ವಿರೋಧ!

Telegram Group
Join Now

ಮೂಡಿಗೆರೆ: ಬೇಲೂರು ಭಾಗದಲ್ಲಿ ಇಬ್ಬರನ್ನು ಬಲಿ ಪಡೆದ ಕಾಡಾನೆಗಳನ್ನು ಮೂಡಿಗೆರೆ ತಾಲೂಕು ಮಾರ್ಗವಾಗಿ ಭದ್ರ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ಸರ್ಕಾರದ ನಿರ್ಧಾರಕ್ಕೆ ತಾಲೂಕಿನಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳ ಮುಖಂಡರು, ರೈತರು ಹಾಗೂ ಸಾರ್ವಜನಿಕರು ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಿದರು.

ಸಭೆಗೂ ಮುನ್ನ ಪ್ರವಾಸಿ ಮಂದಿರದಲ್ಲಿ ನಡೆದ ಸಮಾಲೋಚನೆಯಲ್ಲಿ ಕೆಲವರು ಮೂಡಿಗೆರೆ ಬಂದ್‌ಗೆ ಕರೆ ನೀಡಿ ಉಗ್ರ ಪ್ರತಿಭಟನೆ ನಡೆಸಬೇಕೆಂದು ಒತ್ತಾಯಿಸಿದರು. ಇನ್ನು ಕೆಲವರು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಜನರ ಅಭಿಪ್ರಾಯ ಆಲಿಸಿದ ಬಳಿಕ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಮಾಜಿ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರು ಡಿಸಿಎಫ್ ಬೋರಯ್ಯ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಸಭೆಗೆ ಆಗಮಿಸುವಂತೆ ಮನವಿ ಮಾಡಿದರು.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಸಭೆಯನ್ನು ಅಡ್ಯಂತಾಯ ರಂಗಮಂದಿರಕ್ಕೆ ಸ್ಥಳಾಂತರಿಸಲಾಯಿತು. ಸಭೆಯಲ್ಲಿ ಮಾತನಾಡಿದ ಡಿಸಿಎಫ್ ಬೋರಯ್ಯ, ಬೇಲೂರು ಭಾಗದಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಅಲ್ಲಿನ ಜನರಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ದಾಳಿಗೆ ಕಾರಣವಾದ ಎರಡು ಕಾಡಾನೆಗಳನ್ನು ಸೆರೆಹಿಡಿಯಲಾಗಿದ್ದು, ಮತ್ತೆ ಮಾನವ?ಕಾಡಾನೆ ಸಂಘರ್ಷ ಮರುಕಳಿಸದಂತೆ ಅವುಗಳನ್ನು ಭದ್ರ ಅಭಯಾರಣ್ಯಕ್ಕೆ ಸ್ಥಳಾಂತರಿಸುವಂತೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದರು. ಆದರೆ ಕಾರ್ಯಾಚರಣೆ ಆರಂಭಿಸುವ ಮುನ್ನ ಮೂಡಿಗೆರೆ ಶಾಸಕರು, ರಾಜಕೀಯ ಮುಖಂಡರು ಹಾಗೂ ರೈತ ಸಂಘಟನೆಗಳೊಂದಿಗೆ ಸಭೆ ನಡೆಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.

ತಕ್ಕೊಳದಿಂದ ಸಾರಗೋಡು, ಕುಂದೂರು, ಬಸವನಕೋಟೆ ಹಾಗೂ ದೇವದಾನದ ಮೂಲಕ ಡ್ರೋನ್ ಮತ್ತು ಅರಣ್ಯ ಸಿಬ್ಬಂದಿಯ ನೆರವಿನಿಂದ ಕಾಡಾನೆಗಳನ್ನು ಭದ್ರ ಅರಣ್ಯಕ್ಕೆ ಓಡಿಸುವ ಯೋಜನೆ ರೂಪಿಸಲಾಗಿತ್ತು. ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಸದ್ಯ ಕಾಡಾನೆಗಳು ಸಾಗುವ ದಿಕ್ಕಿನಲ್ಲೇ ತೆರಳಲು ಬಿಡಲಾಗಿದೆ ಎಂದು ಹೇಳಿದರು.

ಆದರೆ ಸಭೆಯಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಮಾಕೋನಹಳ್ಳಿ ಭಾಗದ ರೈತರು ಕಾಡಾನೆಗಳನ್ನು ಭದ್ರ ಅಭಯಾರಣ್ಯಕ್ಕೆ ಓಡಿಸುವಂತೆ ಒತ್ತಾಯಿಸಿದರೆ, ತತ್ಕೋಳ ಹಾಗೂ ಕುಂದೂರು ಭಾಗದ ಗ್ರಾಮಸ್ಥರು ವಿರೋಧಿಸಿದರು. ಕಾಡಾನೆಗಳನ್ನು ಓಡಿಸುವ ಬದಲು ಸೆರೆಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಕೆಲವರು ಆಗ್ರಹಿಸಿದರು. ಈ ವೇಳೆ ಅರಣ್ಯ ಇಲಾಖೆ ವಿರುದ್ಧ ಘೋಷಣೆಗಳು ಕೇಳಿಬಂದು ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಈ ಹೋರಾಟದ ನಿಲುವಿಗೆ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳ ಮುಖಂಡರು ಸಮ್ಮತಿ ಸೂಚಿಸಿದರು. ಮುಂದಿನ ಬೆಳವಣಿಗೆಗಳನ್ನು ಗಮನಿಸಿ ಹೋರಾಟದ ರೂಪುರೇಷೆ ರೂಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯಲ್ಲಿ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಸೇರಿದಂತೆ ವಿವಿಧ ಪಕ್ಷಗಳು ಹಾಗೂ ಸಂಘಟನೆಗಳ ಮುಖಂಡರು, ರೈತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಸಭೆಯಲ್ಲಿ ವಿವಿಧ ಪಕ್ಷ ಹಾಗೂ ಸಂಘಟನೆಗಳ ಮುಖಂಡರಾದ ಬಿ.ಎಸ್.ಜಯರಾಂಗೌಡ, ಶಿವಣ್ಣ, ಎಂ.ಎನ್.ಅಶ್ವಥ್, ಬಿ.ಆರ್.ಭಾಲಕೃಷ್ಣ, ಎಂ.ಪಿ.ಮನು, ಹಾಲಪ್ಪಗೌಡ, ಬಿ.ಕೆ.ಲಕ್ಷ್ಮಣ್ ಕುಮಾರ್, ಕೆ.ಆರ್.ಸುಂದ್ರೇಶ್, ಪಿ.ಜಿ.ಅನುಕುಮಾರ್, ಕುನ್ನಳ್ಳಿ ರವಿ, ಚಂದ್ರೇಗೌಡ ಗಬ್ಬಳ್ಳಿ, ವಿಭಾ ಸುಷ್ಮಾ, ವಿಜಯ್‌ಕುಮಾರ್, ಬ್ರಿಜೇಶ್ ಕಡಿದಾಳ್, ಪ್ರಸಾದ್ ಬಕ್ಕಿ, ಭರತ್ ಬಾಳೂರು, ಬಿ.ಸಿ.ದಯಾಕರ್ ಸೇರಿದಂತೆ ಹಲವು ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!