ಮೂಡಿಗೆರೆ: ತಾಲೂಕಿನ ಮಣ್ಣಿಕೆರೆ ಗ್ರಾಮದಲ್ಲಿ ಟಿಯುಸಿಐ ಮತ್ತು ವಸತಿಗಾಗಿ ಹೋರಾಟ ವೇದಿಕೆ ವತಿಯಿಂದ ನಿವೇಶನ ರಹಿತರು ನಿವೇಶನಕ್ಕಾಗಿ ಒತ್ತಾಯಿಸಿ ಶುಕ್ರವಾರ ಆರಂಭಗೊಂಡ ಧರಣಿ 4ನೇ ದಿನಕ್ಕೆ ಮುಂದುವರೆದಿದೆ.
ಈ ಸಂದರ್ಭದಲ್ಲಿ ಟಿಯುಸಿಐ ಜಿಲ್ಲಾಧ್ಯಕ್ಷ ಕೆ.ಕೆ.ಕೃಷ್ಣಪ್ಪ ಮಾತನಾಡಿ, ಕಳೆದ 10 ವರ್ಷದ ಹಿಂದೆ ನಿವೇಶನಕ್ಕಾಗಿ ಕಾಯ್ದಿರಿಸಿದ್ದ ತಾಲೂಕಿನ ಮಣ್ಣಿಕೆರೆ ಗ್ರಾಮದ ಸರ್ವೇ ನಂಬರ್ 144 ರಲ್ಲಿ 3.20 ಎಕರೆ ಸರಕಾರಿ ಭೂಮಿಯಲ್ಲಿ ನಿವೇಶನ ರಹಿತರಿಗೆ ಇಂದಿಗೂ ಫಲಾನುಭವಿಗಳ ಪಟ್ಟಿ ತಯಾರಿಸಿಲ್ಲ. ಧರಣಿ ಪ್ರಾರಂಭಿಸಿ 4 ದಿನವಾಗಿದೆ.
ತಾ.ಪಂ. ಇಒ ದಯಾವತಿ ಸ್ಥಳಕ್ಕೆ ಭೇಟಿ ನೀಡಿ ಹೋಗಿದ್ದು ಬಿಟ್ಟರೆ, ಸಮಸ್ಯೆ ಬಗೆಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಇಲ್ಲಿ ಪ್ರಭಾವಿ ವ್ಯಕ್ತಿಯೋರ್ವರು ಮನೆ ಕಟ್ಟಿಕೊಳ್ಳಲು ಬಿಟ್ಟಿದ್ದಾರೆ. ಆದರೆ ನಮಗೆ ಮಾತ್ರ ತೆರವು ಮಾಡಬೇಕೆಂದು ಒತ್ತಡ ಹಾಕುತ್ತಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದರು.
ಕೆಲವರು ಹೋರಾಟದ ದಿಕ್ಕು ತಪ್ಪಿಸಲು ನಿವೇಶನ ರಹಿತರಿಗೆ ಆಮಿಷ ಒಡ್ಡುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಯಾರೂ ಬಗ್ಗುವುದಿಲ್ಲ. ಈಗಾಗಲೇ ನಮ್ಮ ಹೋರಾಟಕ್ಕೆ ವಿವಿಧ ಪಕ್ಷ ಹಾಗೂ ಸಂಘಟನೆಗಳು ಸಂಪೂರ್ಣ ಬೆಂಬಲ ಸೂಚಿಸಿದ್ದು, ಇದರಿಂದ ಹೋರಾಟಕ್ಕೆ ಇನ್ನಷ್ಟು ಬಲ ಸಿಕ್ಕಿದೆ. ನಮ್ಮ ನ್ಯಾಯಯುತ ಹೋರಾಟಕ್ಕೆ ಜಯ ಸಿಗುವವರೆಗೂ ಧರಣಿ ಹಿಂಪಡೆಯುವುದಿಲ್ಲವೆಂದು ಹೇಳಿದರು.
ಎಸ್ಡಿಪಿಐ ತಾಲೂಕು ಅಧ್ಯಕ್ಷ ಅಂಗಡಿ ಚಂದ್ರು, ಭೀಮ ಆರ್ಮಿಯ ಹಾದಿಗೆ ಜಯಕುಮಾರ್, ಖಾಲಿದ್, ಚಂದ್ರು, ನಾಗೇಶ್ ಸಾಲುಮರ, ಆದಾಮ್, ಹನೀಫ್, ಯಶೊಧ, ಜಾನಕಿ, ಸವಿತ, ಕೃಷ್ಣ ಕಮ್ಮರಗೂಡು, ರವಿ ಶುಭನಗರ, ರೋಜಿ ಮತ್ತಿತರರಿದ್ದರು.
