ಚಿಕ್ಕಮಗಳೂರು: ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರ ಇತ್ತೀಚಿನ ಹೇಳಿಕೆಗೆ ರಂಭಾಪುರಿ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಜ್ಞಾವಂತ ಉನ್ನತ ಶಿಕ್ಷಣ ಸಚಿವರು ಸಂಯಮದಿಂದ ಮಾತನಾಡಬೇಕು ಎಂದು ಬಾಳೆಹೊನ್ನೂರು ರಂಭಾಪುರಿ ಮಠದ ವೀರ ಸೋಮೇಶ್ವರ ಜಗದ್ಗುರುಗಳು ಸಲಹೆ ನೀಡಿದ್ದಾರೆ.
ಯಾವುದೇ ಧರ್ಮವನ್ನು ಗೌರವಿಸುವುದು ತಪ್ಪಲ್ಲ, ಆದರೆ ಒಂದು ಧರ್ಮವನ್ನು ಮತ್ತೊಂದು ಧರ್ಮಕ್ಕೆ ಹೋಲಿಸುವುದು ಭಾವನಾತ್ಮಕ ಗೊಂದಲಕ್ಕೆ ಕಾರಣವಾಗಬಹುದು. ಭಾರತದ ವೈಶಿಷ್ಟ್ಯವೇ ಸರ್ವಧರ್ಮ ಸಮಭಾವ ಎಂದು ಶ್ರೀಗಳು ಹೇಳಿದ್ದಾರೆ.
ಹಿಂದೂ ಧರ್ಮದ ಬಗ್ಗೆ ಮಾತನಾಡುವಾಗ ಅದರ ಪ್ರಾಚೀನತೆ, ಶ್ರೀಮಂತಿಕೆ ಹಾಗೂ ವೈಚಾರಿಕತೆಯ ನೆಲೆಗಟ್ಟಿನಲ್ಲಿ ಮಾತನಾಡಬೇಕು. ವಿದ್ಯಾರ್ಥಿಗಳು ಹಾಗೂ ಸಮಾಜಕ್ಕೆ ಮಾರ್ಗದರ್ಶನ ನೀಡುವ ಸ್ಥಾನದಲ್ಲಿರುವ ಸಚಿವರ ಹೇಳಿಕೆಗಳು ಏಕತೆ, ಶಾಂತಿ ಮತ್ತು ಪರಸ್ಪರ ಗೌರವ ಮೂಡಿಸುವಂತಿರಬೇಕು ಎಂದು ತಿಳಿಸಿದ್ದಾರೆ.
ಸಚಿವರು ತಮ್ಮ ಹೇಳಿಕೆ ಕುರಿತು ಮತ್ತಷ್ಟು ಸ್ಪಷ್ಟವಾದ ವಿವರಣೆ ನೀಡಬೇಕು. ಧರ್ಮಗಳ ನಡುವೆ ಸಂಘರ್ಷಕ್ಕಿಂತ ಸಂವಾದ, ಸಮುದಾಯಗಳ ನಡುವೆ ಗೌರವ ಇರಬೇಕು. ಪ್ರಜ್ಞಾವಂತ ಸಚಿವರಿಂದ ವಿಭಜನೆಯ ಮಾತು ಸರಿಯಲ್ಲ ಎಂದು ರಂಭಾಪುರಿ ಶ್ರೀಗಳು ಹೇಳಿದ್ದಾರೆ.
