ಮೂಡಿಗೆರೆ:ಬಂಗಾರಪೇಟೆಯ ಭೋವಿ ನಗರದಲ್ಲಿ 6 ವರ್ಷದ ಪುಟ್ಟ ಬಾಲಕಿಯ ಮೇಲೆ ನಡೆದ ಅಮಾನುಷ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ಹಾಗೂ ಸಂತ್ರಸ್ತ ಕುಟುಂಬಕ್ಕೆ ತಕ್ಷಣದ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಮೂಡಿಗೆರೆಯ ಲಯನ್ಸ್ ಸರ್ಕಲ್ ಬಳಿ ಶಾಂತಿಯುತ ಮೌನ ಪ್ರತಿಭಟನೆ ನಡೆಸಲಾಯಿತು.

ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ಹಾಗೂ ಸೋಶಿಯಲ್ ಡೆಮೋಕ್ರೇಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಚಿಕ್ಕಮಗಳೂರು ಜಿಲ್ಲಾ ಘಟಕದ ಜಂಟಿ ಆಶ್ರಯದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಮೇಣದಬತ್ತಿ ಹಿಡಿದು ಶಿಸ್ತುಬದ್ಧವಾಗಿ ಮೌನವಾಗಿ ನಿಲ್ಲುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಆಶಾ ಸಂತೋಷ್ ಮೂಡಿಗೆರೆ ಅವರು, “ಅರಳುವ ಮುನ್ನವೇ ಬಾಡಿದ ಆ ಅಮಾಯಕ ಕರುಳಕುಡಿಯ ಯಾತನೆಗೆ ಇಡೀ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಇದು ಕೇವಲ ಒಂದು ಕುಟುಂಬದ ಮೇಲಾದ ಅನ್ಯಾಯವಲ್ಲ, ಹೆಣ್ಣುಮಕ್ಕಳ ರಕ್ಷಣೆಯ ಜವಾಬ್ದಾರಿಯ ಮೇಲಾದ ದೊಡ್ಡ ಪೆಟ್ಟು. ನಮ್ಮ ಈ ಮೌನ ಅಸಹಾಯಕತೆಯಲ್ಲ, ಬದಲಿಗೆ ಕಾನೂನಿನ ಭಯವೇ ಇಲ್ಲದಂತೆ ವರ್ತಿಸುವ ಕಾಮುಕರ ವಿರುದ್ಧದ ಅಂತರಂಗದ ಆಕ್ರೋಶ” ಎಂದು ಖಂಡಿಸಿದರು.
ಇದೇ ವೇಳೆ, ಬಾಲಕಿಯ ಮೇಲಾದ ದೌರ್ಜನ್ಯ ಮತ್ತು ಸಮಾಜದ ಹೊಣೆಗಾರಿಕೆಯನ್ನು ಕುರಿತು ಆಶಾ ಸಂತೋಷ್ ಮೂಡಿಗೆರೆ ಅ ‘ಅದು ಅರಳುವ ಮುನ್ನವೇ…’ ಎಂಬ ಅತ್ಯಂತ ಭಾವುಕ ಹಾಗೂ ಪ್ರಭಾವಶಾಲಿ ಕವಿತೆಯನ್ನು ವಾಚಿಸಿದರು:
“ಆ 6 ವರ್ಷದ ನಸುಕಿನ ಮೊಗ್ಗು,
ಅರಳುವ ಮುನ್ನವೇ ಬಾಡಿ ಹೋಯಿತೇ?
ಮಾನವೀಯತೆಯೇ ಮಣ್ಣು ಪಾಲಾದ ದೇಶದಲ್ಲಿ,
ಕಾನೂನಿನ ಭಯವೆಂಬುದು ಕರಗಿ ಹೋಯಿತೇ?
ಮೌನವಾಗಿ ನಿಂತಿದ್ದೇವೆ ನಿಜ,
ಆದರೆ ಈ ಮೌನ ಅಸಹಾಯಕತೆಯಲ್ಲ,
ಆ ಅಮಾಯಕ ಮಗುವಿನ ಯಾತನೆಗೆ,
ನಮ್ಮಂತರಂಗದ ಕನಲುವ ಆಕ್ರೋಶ!
ಮೇಣದಬತ್ತಿಯ ಈ ಸಣ್ಣ ಬೆಳಕಿನಲ್ಲಿ,
ಕಾಮುಕರ ಕತ್ತಲನ್ನು ಸುಟ್ಟು ಬೂದಿ ಮಾಡಬೇಕಿದೆ.
ನ್ಯಾಯ ಸಿಗುವವರೆಗೆ, ಆ ಕುಟುಂಬಕ್ಕೆ ಆಸರೆಯಾಗುವವರೆಗೆ,
ನಮ್ಮೀ ಗಂಭೀರ ಹೆಜ್ಜೆ ಹಿಂಜರಿಯುವುದಿಲ್ಲ!”
ಪ್ರಮುಖ ಬೇಡಿಕೆಗಳು:
ಬಂಗಾರಪೇಟೆ ಪ್ರಕರಣದ ವಿಚಾರಣೆಯನ್ನು ತಕ್ಷಣವೇ ಫಾಸ್ಟ್ ಟ್ರ್ಯಾಕ್ (ಸಂಕ್ಷಿಪ್ತ) ನ್ಯಾಯಾಲಯಕ್ಕೆ ವಹಿಸಿ, ಶೀಘ್ರ ತೀರ್ಪು ನೀಡಬೇಕು.
ಅಪರಾಧಿಗಳಿಗೆ ಕಾನೂನಿನಡಿಯಲ್ಲಿ ಅತ್ಯಂತ ಕಠಿಣ ಹಾಗೂ ಮಾದರಿಯಾಗುವ ಶಿಕ್ಷೆ ವಿಧಿಸಬೇಕು.
ಹೆಣ್ಣುಮಕ್ಕಳು ಹಾಗೂ ಮಕ್ಕಳ ರಕ್ಷಣೆಗೆ ಸರ್ಕಾರ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕುಎಂದರು.
ಈ ಪ್ರತಿಭಟನೆಯಲ್ಲಿ WIM ಜಿಲ್ಲಾ ಸಮಿತಿಯ ಉಪಾಧ್ಯಕ್ಷೆ ಮಹೀನ್, ಕಾರ್ಯದರ್ಶಿ ನಜ್ರತ್, ಜಂಟಿ ಕಾರ್ಯದರ್ಶಿ ಸವಿತಾ, ಖಜಾಂಚಿ ಸಫಾನ, ಸದಸ್ಯೆ ಸಫಿಯಾ ಹಾಗೂ WIM ಮೂಡಿಗೆರೆ ಶಾಖೆಯ ಶಬಾತ್, ವನಿತಾ, ಗೀತಾ, ಸಾಜಿದಾ, ಸ್ಪಂದನಾ, ಚಂದ್ರಿಕಾ SDPI ತಾಲೂಕು ಅಧ್ಯಕ್ಷ ಷರೀಫ್, ಜಿಲ್ಲಾ ಸಮಿತಿ ಸದಸ್ಯರಾದ ಖಾಲಿದ್, ಸಿಕಂದರ್, ಹನೀಫ್ ಫೈಜ್ ಮತ್ತು ತಾಲೂಕು ಉಪಾಧ್ಯಕ್ಷ ನಾಗೇಶ್ ಸಲ್ಮಾರ ಅವರು ಉಪಸ್ಥಿತರಿದ್ದರು
