Saturday, September 5, 2026
Homeಜಿಲ್ಲಾಸುದ್ದಿಮಹಿಳೆಯರು ದೌರ್ಜನ್ಯವನ್ನು ಸಹಿಸಿಕೊಳ್ಳದೆ, ಅನ್ಯಾಯದ ವಿರುದ್ಧ ಧೈರ್ಯವಾಗಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ: ಮಾಜಿ ಸಚಿವೆ ಮೋಟಮ್ಮ

ಮಹಿಳೆಯರು ದೌರ್ಜನ್ಯವನ್ನು ಸಹಿಸಿಕೊಳ್ಳದೆ, ಅನ್ಯಾಯದ ವಿರುದ್ಧ ಧೈರ್ಯವಾಗಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ: ಮಾಜಿ ಸಚಿವೆ ಮೋಟಮ್ಮ

Telegram Group
Join Now

ಮೂಡಿಗೆರೆ: ತಾಲೂಕಿನ ಎಂ.ಕೆ. ಇಂದಿರಾ ವೇದಿಕೆಯಲ್ಲಿ 2ನೇ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆಯಿತು

ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಇಂದಿಗೂ ಸಾಧ್ಯವಾಗಿಲ್ಲ. ಪ್ರಧಾನಿ ಸೇರಿದಂತೆ ಜನಪ್ರತಿನಿಧಿಗಳು ಗಂಭೀರವಾಗಿ ಧ್ವನಿ ಎತ್ತಬೇಕೆಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.

ಅವರು ಶುಕ್ರವಾರ ಅಡ್ಯಂತಾಯ ರಂಗಮಂದಿರದ ಎಂ.ಕೆ.ಇಂದಿರಾ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷೆ ಭಾಗ್ಯ ಲಕ್ಷ್ಮಣ್‌ಗೌಡ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಸಾಪ ಮಹಿಳಾ ಘಟಕದ ವತಿಯಿಂದ ಏರ್ಪಡಿಸಿದ್ದ 2ನೇ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರಕಾರದ ಆಡಳಿತದಲ್ಲಿ 33 ಪುರುಷರು ಮಂತ್ರಿಗಳಾಗಿದ್ದು, ಮಹಿಳೆಯರನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಇದನ್ನು ಮಹಿಳೆಯರು ಪ್ರಶ್ನಿಸದಿದ್ದರೆ ನಮ್ಮ ಹಕ್ಕು ಪಡೆಯಲು ಸಾಧ್ಯವಾಗುವುದಿಲ್ಲ ಎಂದ ಅವರು, ಹಿಂದೆ ಮಹಿಳೆಯರು ಜೋಗುಳ, ಮದುವೆ, ಕಳೆ ಕೀಳುವಾಗ ಹಾಡುಗಳನ್ನು ಹಾಡಿ ಸಂತೋಷ ಪಡುತ್ತಿದ್ದ ಮಹಿಳೆಯರು ಸಾಹಿತ್ಯ ಬರೆಯಲು, ಕವನ ಸಂಕಲ ರೂಪಿಸಲು ಬರುತ್ತಿರಲಿಲ್ಲ. ಆದರೆ ಕಾಲ ಬದಲಾದಂತೆ ಮಹಿಳೆಯರು ಕೂಡ ಎಲ್ಲಾ ರಂಗದಲ್ಲಿ ಗುರುತಿಸಿಕೊಳ್ಳುವ ಜತೆಗೆ ಸಾಹಿತ್ಯ ಬರೆಯಲು ಪ್ರಾರಂಭಿಸಿದ್ದಾರೆ. ಇದಕ್ಕೆ ಮನೆಯಲ್ಲಿ ಹಾಗೂ ಸಮಾಜದಲ್ಲಿ ಪ್ರೋತ್ಸಾಹ ಸಿಗಬೇಕೆಂದು ಹೇಳಿದರು.

ಮಹಿಳೆಯರು ತಮ್ಮ ಮೇಲಿನ ದೌರ್ಜನ್ಯವನ್ನು ಸಹಿಸಿಕೊಂಡು ಮೌನವಾಗಿರದೆ, ಅನ್ಯಾಯದ ವಿರುದ್ಧ ಧೈರ್ಯವಾಗಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಮಹಿಳೆಯರು ಸಂಘಟಿತರಾಗಿ ಪರಸ್ಪರ ಬೆಂಬಲ ನೀಡುವುದರ ಮೂಲಕ ತಮ್ಮ ಮನೋಬಲವನ್ನು ಹೆಚ್ಚಿಸಿಕೊಳ್ಳಬೇಕು. ಯಾವುದೇ ರೀತಿಯ ದೌರ್ಜನ್ಯ ನಡೆದರೂ ಅದನ್ನು ಖಂಡಿಸಿ, ಕಾನೂನುಬದ್ಧವಾಗಿ ನ್ಯಾಯಕ್ಕಾಗಿ ಹೋರಾಡುವ ಸಂಕಲ್ಪ ಮಾಡಬೇಕು. ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವುದು ಕೇವಲ ಮಹಿಳೆಯರ ಜವಾಬ್ದಾರಿಯಲ್ಲ. ಇಡೀ ಸಮಾಜದ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ತಾನು ಅಧ್ಯಕ್ಷನಾದ ಬಳಿಕ ಜಿಲ್ಲೆಯಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಬೇಕೆಂಬ ಮಹದಾಸೆ ಇತ್ತು. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಮಹಿಳಾ ಘಟಕ ಪ್ರಾರಂಭಿಸಿ ಬಾಳೆಹೊನ್ನೂರಿನಲ್ಲಿ ಮಹಿಳಾ ಘಟಕದ ಸಮ್ಮೇಳನ ಮಾಡಲಾಯಿತು. ಇದೀಗ 2ನೇ ಸಮ್ಮೇಳನ ಕೂಡ ಜರುಗಿದ್ದು, ಈ ಮೂಲಕ ಎಲೆಮರೆಕಾಯಿಯಂತಿರುವ ಸಾಹಿತ್ಯಾ ಸಿರಿಗಳನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ಪ್ರಯತ್ನ ಪರಿಷತ್ತಿನ ಸದಸ್ಯರಿಂದ ಆಗಬೇಕಿದೆ ಎಂದು ಹೇಳಿದರು.

ಕಸಾಪ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲಾ ಮಂಚೇಗೌಡ ಮಾತನಾಡಿ, ಈ ನಾಡಿನಲ್ಲಿ ಮಹಿಳೆಯರು ಕೂಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಸೃಜನಶೀಲತೆ, ಚಿಂತನೆ ಹಾಗೂ ಬರವಣಿಗೆಯ ಮೂಲಕ ನಾಡಿನ ಸಾಹಿತ್ಯ ಲೋಕವನ್ನು ಮತ್ತಷ್ಟು ಶ್ರೀಮಂತಗೊಳಿಸುವ ಉದ್ದೇಶದಿಂದ ಇಲ್ಲಿ ಮಹಿಳಾ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ರಾಷ್ಟ್ರಧ್ವಜಾರೋಹಣವನ್ನು ಮಾಜಿ ಸಚಿವೆ ಮೋಟಮ್ಮ, ಪರಿಷತ್ತಿನ ಧ್ವಜಾರೋಹಣವನ್ನು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ನಾಡಧ್ವಜಾರೋಹಣವನ್ನು ಕಸಾಪ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲಾ ಮಂಚೇಗೌಡ ನೆರವೇರಿಸಿದರು. ಬಳಿಕ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಮ್ಮೇಳನಾಧ್ಯಕ್ಷೆ ಭಾಗ್ಯ ಲಕ್ಷ್ಮಣ್ ಗೌಡ ಅವರ ಮೆರವಣಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷರ ಭಾಷಣ ನುಡಿಯನ್ನು ಡಾ.ಜೆ.ಪಿ.ಕೃಷ್ಣೇಗೌಡ ಬಿಡುಗಡೆಗೊಳಿಸಿದರು. ವಿವಿಧ ಸಂಘ ಸಂಸ್ಥೆ ಮುಖಂಡರು ಸಮ್ಮೇಳನಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು.

ನಿಕಟಪೂರ್ವ ಸಮ್ಮೇಳನಾಧ್ಯರಾದ ಸಾಹಿತಿ ಹಳೆಕೋಟೆ ರಮೇಶ್, ಡಾ.ಸಿ.ಎಂ.ಸುಲೋಚನಾ, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲಾ ಮಂಚೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ತಾಲೂಕು ಅಧ್ಯಕ್ಷ ಡಿ.ಕೆ.ಲಕ್ಷ್ಮಣ್ ಗೌಡ, ಕಾರ್ಯದರ್ಶಿ ಸುಚಿತ್ರ ಪ್ರಸನ್ನ, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ರೇಖಾ ರವಿರಾಜ್, ಸುನಿತಾ ಕಿರಣ್ ತರಿಕೆರೆ, ಲತಾ ರಾಜಶೇಖರ್ ಕಡೂರು, ಡಾ.ಜೆ.ಕೆ.ಕೃಷ್ಣೇಗೌಡ, ಅಶ್ವಿನಿ ಸಂತೋಷ್, ವಿಜಯಲಕ್ಷ್ಮಿ, ವಿದ್ಯಾರಾಜು ಮತ್ತಿತರರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments