ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗುಲ್ ಗ್ರಾಮದ ದೊಡ್ಡಬಾವಿ ಹಳ್ಳದಲ್ಲಿ ಸೋಮವಾರ ಮಹಿಳೆಯರು ಸಂಪ್ರದಾಯಬದ್ಧವಾಗಿ ಗಂಗೆ ಪೂಜೆ ನೆರವೇರಿಸಿ ಸ್ವರ್ಣ ಗೌರಿಯನ್ನು ತಮ್ಮ ತಮ್ಮ ಮನೆಗಳಿಗೆ ಕೊಂಡೊಯ್ದರು.

ಗೌರಿ ಹಬ್ಬದ ಅಂಗವಾಗಿ ಬೆಳಿಗ್ಗೆ ದೊಡ್ಡಬಾವಿ ಹಳ್ಳದಲ್ಲಿ ಗಂಗೆ ಪೂಜೆ ನೆರವೇರಿಸಿದ ಮಹಿಳೆಯರು, ಪೂಜಾ ವಿಧಿವಿಧಾನಗಳನ್ನು ಭಕ್ತಿಭಾವದಿಂದ ನೆರವೇರಿಸಿದರು. ಬಳಿಕ ಸ್ವರ್ಣ ಗೌರಿಯನ್ನು ಮನೆಗಳಿಗೆ ಕೊಂಡೊಯ್ದು ಸಂಪ್ರದಾಯದಂತೆ ಮನೆ ತುಂಬಿಸಿಕೊಂಡು ವಿಶೇಷ ಪೂಜೆ ಸಲ್ಲಿಸಿದರು.

ಇದೇ ವೇಳೆ ಮೂಡಿಗೆರೆ ತಾಲೂಕಿನ ಜಾಣಿಗೆ ಗ್ರಾಮದಲ್ಲಿಯೂ ಬೆಳಿಗ್ಗೆ 6.30ರ ಶುಭ ಮುಹೂರ್ತದಲ್ಲಿ ಸಂಪ್ರದಾಯದಂತೆ ಸ್ವರ್ಣ ಗೌರಿಯನ್ನು ಮನೆ ತುಂಬಿಸಿಕೊಳ್ಳಲಾಯಿತು. ಮಹಿಳೆಯರು ಗೌರಿಯನ್ನು ಮನೆಗೆ ಬರಮಾಡಿಕೊಂಡು ಪೂಜೆ ಸಲ್ಲಿಸಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.

ದೇವನಗುಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಯಂತಿ, ಲೀಲಾ, ಸುಧಾ, ಸೌಮ್ಯ, ಸ್ವಾತಿ, ಅನುಷಾ, ಶ್ವೇತಾ, ಸಂಜಯ್ ಕೊಟ್ಟಿಗೆಹಾರ, ನರೇಂದ್ರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಗ್ರಾಮೀಣ ಭಾಗದಲ್ಲಿ ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಗೌರಿ ಹಬ್ಬದ ಸಂಪ್ರದಾಯವನ್ನು ಮಹಿಳೆಯರು ಭಕ್ತಿಭಾವದಿಂದ ಮುಂದುವರಿಸಿಕೊಂಡು ಬಂದಿದ್ದು, ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು.

