ಚಿಕ್ಕಮಗಳೂರು: ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ಜನವರಿ 10 ಅಥವಾ 15ರ ಒಳಗಾಗಿ ನೂರಕ್ಕೆ ನೂರು ಪ್ರತಿಶತ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಕ್ಷೇತ್ರ ಪುನರ್ವಿಂಗಡಣೆ (ಡಿಲಿಮಿಟೇಶನ್) ಪ್ರಕ್ರಿಯೆ ಈಗಾಗಲೇ ಸಂಪೂರ್ಣ ಪೂರ್ಣಗೊಂಡಿದ್ದು, ಮೀಸಲಾತಿಗೆ ಸಂಬಂಧಿಸಿದ ಪ್ರಾಥಮಿಕ ಅಧಿಸೂಚನೆಯನ್ನು ನಾಳೆ (ಅಕ್ಟೋಬರ್ 8 )ಹೊರಡಿಸಲಾಗುವುದು. ಇದಕ್ಕೆ ಸಾರ್ವಜನಿಕ ಆಕ್ಷೇಪಣೆ ಸಲ್ಲಿಸಲು 10 ದಿನಗಳ ಕಾಲಾವಕಾಶ ನೀಡಿದ ಬಳಿಕ ಅಂತಿಮ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಹಸ್ತಾಂತರಿಸಲಾಗುತ್ತದೆ ಎಂದು ಅವರು ಹೇಳಿದರು.
ಗ್ರಾಮ ಪಂಚಾಯಿತಿಗಳು ಪಟ್ಟಣ ಪಂಚಾಯಿತಿಗಳಾಗಿ ಮತ್ತು ಪಟ್ಟಣ ಪಂಚಾಯಿತಿಗಳು ನಗರಸಭೆಗಳಾಗಿ ಮೇಲ್ದರ್ಜೆಗೇರಿದ ಕಾರಣ ಕ್ಷೇತ್ರ ಪುನರ್ವಿಂಗಡಣೆ ಅನಿವಾರ್ಯವಾಗಿತ್ತು ಎಂದು ಸ್ಪಷ್ಟಪಡಿಸಿದ ಅವರು, ನವೆಂಬರ್‌ನಲ್ಲಿ ಕೇಂದ್ರ ಚುನಾವಣಾ ಆಯೋಗದಿಂದ ಅಂತಿಮ ಮತದಾರರ ಪಟ್ಟಿ ಬಂದ ಬಳಿಕ, ನಿಯಮಾನುಸಾರ 45 ದಿನಗಳ ಅವಧಿಯನ್ನು ಗಣನೆಗೆ ತೆಗೆದುಕೊಂಡು ಡಿಸೆಂಬರ್ 15ರ ಸುಮಾರಿಗೆ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ ಎಂದರು.
