ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಮಹತ್ವದ ವಿಧಾನಮಂಡಲ ವಿಶೇಷ ಅಧಿವೇಶನ ಆರಂಭವಾಗಲಿದೆ. ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತ ಕಸ್ತೂರಿ ರಂಗನ್ ವರದಿ ಹಾಗೂ ಕೇಂದ್ರ ಸರ್ಕಾರದ ಕರಡು ಅಧಿಸೂಚನೆ ಬಗ್ಗೆ ಈ ಕಲಾಪದಲ್ಲಿ ಪ್ರಮುಖವಾಗಿ ಚರ್ಚೆ ನಡೆಯಲಿದೆ.
ಇದೇ ಸೆಪ್ಟೆಂಬರ್ 27ರ ಒಳಗೆ ಕೇಂದ್ರಕ್ಕೆ ರಾಜ್ಯದ ನಿಲುವು ತಿಳಿಸಬೇಕಾಗಿರುವುದರಿಂದ, ಕರಡು ಅಧಿಸೂಚನೆಯನ್ನು ವಿರೋಧಿಸಿ ರಾಜ್ಯ ಸರ್ಕಾರ ಸದನದಲ್ಲಿ ಅಧಿಕೃತ ನಿರ್ಣಯ ಅಂಗೀಕರಿಸುವ ಸಾಧ್ಯತೆಯಿದೆ.
ಕೇವಲ ಮೂರೇ ದಿನಕ್ಕೆ ಸೀಮಿತಗೊಳಿಸಿರುವ ಈ ಅಧಿವೇಶನದಲ್ಲಿ ಯಾವುದೇ ಪ್ರಶ್ನೋತ್ತರ ಹಾಗೂ ಗಮನಸೆಳೆಯುವ ಸೂಚನೆಗಳಿಗೆ ಅವಕಾಶವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ್ದು, ಇದು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ.
