Friday, March 27, 2026
Homeಆಧ್ಯಾತ್ಮವಿಶ್ವದಾದ್ಯಂತ ಕ್ರಿಸ್ಮಸ್ ಸಂಭ್ರಮ: ಶಾಂತಿ ಮತ್ತು ಪ್ರೀತಿಯ ಸಂದೇಶವಾಹಕ ಯೇಸುಕ್ರಿಸ್ತರ ದಿವ್ಯ ಸಂದೇಶಗಳು

ವಿಶ್ವದಾದ್ಯಂತ ಕ್ರಿಸ್ಮಸ್ ಸಂಭ್ರಮ: ಶಾಂತಿ ಮತ್ತು ಪ್ರೀತಿಯ ಸಂದೇಶವಾಹಕ ಯೇಸುಕ್ರಿಸ್ತರ ದಿವ್ಯ ಸಂದೇಶಗಳು

ಇಂದು ಜಗತ್ತಿನಾದ್ಯಂತ ಸಂಭ್ರಮ ಸಡಗರದಿಂದ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಗುತ್ತಿದೆ. ಕೇವಲ ಕ್ರೈಸ್ತ ಬಾಂಧವರಷ್ಟೇ ಅಲ್ಲದೆ, ಪ್ರೀತಿ ಮತ್ತು ಶಾಂತಿಯನ್ನು ಬಯಸುವ ಎಲ್ಲಾ ಧರ್ಮದ ಜನರು ಇಂದು ಯೇಸುಕ್ರಿಸ್ತರ ಜನನವನ್ನು ಸ್ಮರಿಸುತ್ತಿದ್ದಾರೆ. ಅನ್ಯಾಯ, ಅಧರ್ಮ ಮತ್ತು ಕತ್ತಲೆಯಿಂದ ಕೂಡಿದ್ದ ಜಗತ್ತಿಗೆ ಬೆಳಕಿನ ಹಾದಿ ತೋರಿಸಲು, ದೈವಪುತ್ರ ಯೇಸುಕ್ರಿಸ್ತರು ಭೂಮಿಗೆ ಬಂದ ಈ ದಿನವು ಮಾನವೀಯತೆಯ ದ್ಯೋತಕವಾಗಿದೆ. ಶಾಂತಿ, ಸಹಬಾಳ್ವೆ ಮತ್ತು ನಿಸ್ವಾರ್ಥ ಸೇವೆಯ ಮೂಲಕ ವಿಶ್ವವನ್ನೇ ಒಂದುಗೂಡಿಸಿದ ಯೇಸುವಿನ ಬೋಧನೆಗಳು ಇಂದಿನ ಆಧುನಿಕ ಯುಗಕ್ಕೂ ದಾರಿದೀಪವಾಗಿವೆ.

ಕ್ರಿಸ್ಮಸ್ ಹಬ್ಬದ ಈ ಸುಸಂದರ್ಭದಲ್ಲಿ, ಯೇಸುಕ್ರಿಸ್ತರು ಜಗತ್ತಿಗೆ ನೀಡಿದ ಹತ್ತು ಶ್ರೇಷ್ಠ ದಿವ್ಯ ಸಂದೇಶಗಳು ಇಲ್ಲಿವೆ:

ಯೇಸುಕ್ರಿಸ್ತರ ಹತ್ತು ಶ್ರೇಷ್ಠ ದಿವ್ಯ ಸಂದೇಶಗಳು

  1. ಪರಮ ಪ್ರೀತಿಯ ಆಜ್ಞೆ: “ನಿಮ್ಮನ್ನು ನೀವು ಪ್ರೀತಿಸಿಕೊಳ್ಳುವಂತೆಯೇ, ನಿಮ್ಮ ನೆರೆಯವರನ್ನೂ ಪ್ರೀತಿಸಿ.” ಇದು ಯೇಸುವಿನ ಬೋಧನೆಗಳ ಮೂಲಾಧಾರವಾಗಿದೆ. ಪ್ರೀತಿಯೇ ಜಗತ್ತನ್ನು ಗೆಲ್ಲಬಲ್ಲ ಏಕೈಕ ಆಯುಧ ಎಂದು ಅವರು ಸಾರಿದರು.
  2. ಕ್ಷಮಾಗುಣದ ಮಹತ್ವ: “ಒಬ್ಬನು ನಿನ್ನ ಬಲಗೆನ್ನೆಗೆ ಹೊಡೆದರೆ, ಅವನಿಗೆ ಎಡಗೆನ್ನೆಯನ್ನೂ ತೋರಿಸು.” ಇದು ಸೇಡಿನ ಬದಲು ಶಾಂತಿಯಿಂದ ದ್ವೇಷವನ್ನು ಗೆಲ್ಲುವುದನ್ನು ಸೂಚಿಸುತ್ತದೆ. ಕ್ಷಮಿಸುವುದು ದೌರ್ಬಲ್ಯವಲ್ಲ, ಅದು ಮಹಾನ್ ವ್ಯಕ್ತಿಗಳ ಲಕ್ಷಣ.
  3. ಅಂತರಂಗದ ಶುದ್ಧತೆ ಮತ್ತು ಕರುಣೆ: ಯೇಸುಕ್ರಿಸ್ತರ ಜೀವನದ ಒಂದು ಪ್ರಮುಖ ಘಟನೆಯು ನಮಗೆ ಅಂತರಂಗದ ಶುದ್ಧತೆಯ ಪಾಠವನ್ನು ಕಲಿಸುತ್ತದೆ. ಒಮ್ಮೆ ಒಬ್ಬ ಮಹಿಳೆ ತಪ್ಪು ಮಾಡಿದಾಗ, ಜನರು ಆಕೆಗೆ ಕಲ್ಲಿನಿಂದ ಹೊಡೆಯಲು ಮುಂದಾದರು. ಆಗ ಯೇಸುಕ್ರಿಸ್ತರು ಶಾಂತವಾಗಿ, “ನಿಮ್ಮಲ್ಲಿ ಯಾರು ಪಾಪ ಮಾಡಿಲ್ಲವೋ, ಅವರು ಮೊದಲು ಈಕೆಯ ಮೇಲೆ ಕಲ್ಲೆಸೆಯಲಿ” ಎಂದರು. ಇರರರ್ಥ, ನಾವ್ಯಾರೂ ಸಂಪೂರ್ಣ ಪರಿಪೂರ್ಣರಲ್ಲದ ಕಾರಣ ಬೇರೆಯವರ ತಪ್ಪುಗಳನ್ನು ಎಣಿಸುವ ಅಥವಾ ಅವರನ್ನು ಟೀಕಿಸುವ ಹಕ್ಕು ನಮಗಿಲ್ಲ. ಬೇರೆಯವರನ್ನು ಬದಲಾಯಿಸಲು ಅಥವಾ ವಿಮರ್ಶಿಸಲು ಪ್ರಯತ್ನಿಸುವ ಮುನ್ನ, ನಮ್ಮೊಳಗಿನ ದೋಷಗಳನ್ನು ಪ್ರಾಮಾಣಿಕವಾಗಿ ಗುರುತಿಸಿ ಮೊದಲು ನಮ್ಮನ್ನು ನಾವು ಸುಧಾರಿಸಿಕೊಳ್ಳಬೇಕು ಎಂಬುದು.
  4. ಸೇವೆಯ ಮನೋಭಾವ: “ಸೇವೆಯನ್ನು ಮಾಡಿಸಿಕೊಳ್ಳಲು ನಾನು ಬರಲಿಲ್ಲ, ಸೇವೆ ಮಾಡುವುದಕ್ಕಾಗಿ ಮತ್ತು ಅನೇಕರ ವಿಮೋಚನೆಗಾಗಿ ನನ್ನ ಪ್ರಾಣ ನೀಡಲು ಬಂದೆ.” ದೀನದಲಿತರ ಸೇವೆಯಲ್ಲಿ ದೇವರನ್ನು ಕಾಣಬಹುದು ಎಂಬುದು ಅವರ ಬೋಧನೆ.
  5. ಸತ್ಯದ ಹಾದಿ: “ನೀವು ಸತ್ಯವನ್ನು ತಿಳಿದುಕೊಳ್ಳುವಿರಿ ಮತ್ತು ಆ ಸತ್ಯವು ನಿಮ್ಮನ್ನು ಸ್ವತಂತ್ರರನ್ನಾಗಿ ಮಾಡುವುದು.” ಈ ಮಾತಿನ ಅರ್ಥ ಸುಳ್ಳಿನ ಸಂಕೋಲೆಯಿಂದ ಮುಕ್ತರಾಗಲು ಸತ್ಯವೇ ಏಕೈಕ ಮಾರ್ಗ.
  6. ಶಾಂತಿಯ ಮಂತ್ರ: “ಶಾಂತಿಯನ್ನುಂಟು ಮಾಡುವವರು ಧನ್ಯರು; ಏಕೆಂದರೆ ಅವರು ದೇವರ ಮಕ್ಕಳೆನಿಸಿಕೊಳ್ಳುವರು.” ಸಮಾಜದಲ್ಲಿ ಶಾಂತಿಯನ್ನು ನೆಲೆಸುವಂತೆ ಮಾಡುವುದು ಪರಮ ಪುಣ್ಯದ ಕೆಲಸ.
  7. ಭರವಸೆಯ ಬೆಳಕು: “ನಾನೇ ಲೋಕದ ಬೆಳಕು; ನನ್ನನ್ನು ಹಿಂಬಾಲಿಸುವವನು ಕತ್ತಲೆಯಲ್ಲಿ ನಡೆಯದೆ ಜೀವದ ಬೆಳಕನ್ನು ಹೊಂದುವನು.” ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಲು ವಿಶ್ವಾಸದ ದೀಪ ಅತಿ ಅಗತ್ಯ.
  8. ವಿನಯ ಮತ್ತು ನಮ್ರತೆ: “ತನ್ನನ್ನು ತಾನು ದೊಡ್ಡವನೆಂದು ಮಾಡಿಕೊಳ್ಳುವವನು ತಗ್ಗಿಸಲ್ಪಡುವನು; ತನ್ನನ್ನು ತಾನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.” ಈ ಮಾತಿನ ಅರ್ಥ, ಅಹಂಕಾರದ ತ್ಯಾಗವೇ ಶ್ರೇಯಸ್ಸಿನ ಹಾದಿ ಎಂಬುದಾಗಿದೆ.
  9. ಪರಿಶುದ್ಧ ಹೃದಯ: “ಪರಿಶುದ್ಧ ಹೃದಯವುಳ್ಳವರು ಧನ್ಯರು; ಯಾಕಂದರೆ ಅವರು ದೇವರನ್ನು ಕಾಣುವರು.” ಆಡಂಬರವಿಲ್ಲದ ಭಕ್ತಿ ಮತ್ತು ನಿರ್ಮಲ ಮನಸ್ಸಿನಲ್ಲಿ ದೇವರು ನೆಲೆಸುತ್ತಾನೆ.
  10. ಮಾರ್ಗದರ್ಶನ: “ಕೇಳಿರಿ ನಿಮಗೆ ಕೊಡಲ್ಪಡುವುದು; ಹುಡುಕಿರಿ ನಿಮಗೆ ಸಿಗುವುದು; ತಟ್ಟಿರಿ ನಿಮಗೆ ತೆರೆಯಲ್ಪಡುವುದು.” ಅಚಲವಾದ ವಿಶ್ವಾಸ ಮತ್ತು ಪ್ರಯತ್ನವಿದ್ದರೆ ಗುರಿ ಮುಟ್ಟುವುದು ಸಾಧ್ಯ ಎಂದು ಯೇಸು ಭರವಸೆ ನೀಡಿದರು.

ಈ ಹತ್ತು ಸೂತ್ರಗಳು ಕೇವಲ ಮಾತುಗಳಲ್ಲ, ಇವು ಮನುಷ್ಯನನ್ನು ಮಹಾಮಾನವನನ್ನಾಗಿ ಮಾಡುವ ದಿವ್ಯ ಮಂತ್ರಗಳು. ಕ್ರಿಸ್ಮಸ್ ಸಂಭ್ರಮದ ಈ ವೇಳೆಯಲ್ಲಿ ಈ ಸಂದೇಶಗಳನ್ನು ನಮ್ಮ ಜೀವನದ ಭಾಗವಾಗಿಸಿಕೊಳ್ಳೋಣ. ಲೋಕದಲ್ಲಿ ದ್ವೇಷ ಅಳಿಯಲಿ, ಪ್ರೀತಿ ಮತ್ತು ಸಹಬಾಳ್ವೆ ನೆಲೆಸಲಿ.

ನಾಡಿನ ಸಮಸ್ತ ಜನತೆಗೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು!

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!