Saturday, March 28, 2026
Homebig breakingದುಬೈ ಏರ್‌ಶೋನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ: ಪೈಲಟ್ ಸಾವು

ದುಬೈ ಏರ್‌ಶೋನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ: ಪೈಲಟ್ ಸಾವು


ಅಬುಧಾಬಿ: ದುಬೈ ಏರ್‌ಶೋದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಪ್ರದರ್ಶನ ಹಾರಾಟದ ವೇಳೆ ಭಾರತೀಯ ವಾಯುಪಡೆಗೆ ಸೇರಿದ ತೇಜಸ್ ಯುದ್ಧ ವಿಮಾನ ಪತನಗೊಂಡಿದ್ದು, ಪೈಲಟ್ ಮೃತಪಟ್ಟಿದ್ದಾರೆ. ದುರ್ಘಟನೆ ಅಲ್ ಮಕ್ತೂಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ್ದು, ಪೈಲಟ್ ಮೃತಪಟ್ಟಿರುವುದಾಗಿ ಭಾರತೀಯ ವಾಯುಪಡೆ (IAF) ಅಧಿಕೃತವಾಗಿ ದೃಢಪಡಿಸಿದೆ.

ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ (HAL) ನಿರ್ಮಿಸಿದ ಏಕಸೀಟ್ ಲೈಟ್ ಕೊಂಬಾಟ್ ಏರ್‌ಕ್ರಾಫ್ಟ್ (LCA) ಇದಾಗಿದ್ದು, ಪೈಲಟ್ ನೆಗೆಟಿವ್ ಜಿ-ಫೋರ್ಸ್ ಟರ್ನ್‌ನಿಂದ ಹೊರಬರಲು ವಿಫಲವಾದ ಕಾರಣ ನಿಯಂತ್ರಣ ಕಳೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಪಘಾತದ ಕುರಿತು ಪ್ರಕಟಣೆ ಹೊರಡಿಸಿದ IAF, “ದುಬೈ ಏರ್‌ಶೋ ಪ್ರದರ್ಶನ ಹಾರಾಟದ ವೇಳೆ ತೇಜಸ್ ವಿಮಾನ ಅಪಘಾತಕ್ಕೊಳಗಾಗಿದೆ. ಪೈಲಟ್ ಅವರ ನಿಧನಕ್ಕೆ ಭಾರತೀಯ ವಾಯುಪಡೆ ಆಳವಾದ ಸಂತಾಪ ಸೂಚಿಸುತ್ತದೆ. ಅಪಘಾತದ ಕಾರಣಗಳನ್ನು ಪರಿಶೀಲಿಸಲು ವಿಚಾರಣಾ ಸಮಿತಿ ರಚಿಸಲಾಗಿದೆ,” ಎಂದು ತಿಳಿಸಿದೆ.

ದುಬೈ ಏರ್‌ಶೋ ವಿಶ್ವದ ಪ್ರಮುಖ ವಿಮಾನಯಾನ ಪ್ರದರ್ಶನಗಳಲ್ಲಿ ಒಂದಾಗಿದ್ದು, ಪ್ರತಿ ಎರಡು ವರ್ಷಕ್ಕೊಮ್ಮೆ ಆಯೋಜಿಸಲಾಗುತ್ತದೆ. ಈ ವರ್ಷ ಎಮಿರೇಟ್ಸ್ ಮತ್ತು ಫ್ಲೈದುಬೈ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ಬಹುಬಿಲಿಯನ್ ಡಾಲರ್ ಮೌಲ್ಯದ ಖರೀದಿಗಳನ್ನು ಘೋಷಿಸಿದೆ

ಕಳೆದ ಎರಡು ವರ್ಷಗಳಲ್ಲಿ ತೇಜಸ್ ವಿಮಾನಕ್ಕೆ ಸಂಬಂಧಿಸಿದ ಎರಡನೇ ಅಪಘಾತ ಇದಾಗಿದೆ. 2024ರ ಮಾರ್ಚ್‌ನಲ್ಲಿ ರಾಜಸ್ಥಾನದ ಜೈಸಲ್ಮೇರಿನಲ್ಲಿ ಮತ್ತೊಂದು ತೇಜಸ್ ವಿಮಾನ ಪತನಗೊಂಡಿದ್ದು, ಆ ಸಂದರ್ಭದಲ್ಲಿ ಪೈಲಟ್ ಸುರಕ್ಷಿತವಾಗಿ ಹೊರಬಂದಿದ್ದರು. 2001ರಲ್ಲಿ ಪರೀಕ್ಷಾ ಹಾರಾಟ ಆರಂಭವಾದ ನಂತರ 23 ವರ್ಷಗಳಲ್ಲಿ ಅದು ಮೊದಲ ಅಪಘಾತವಾಗಿತ್ತು.

ತೇಜಸ್ 4.5ನೇ ತಲೆಮಾರಿನ ಬಹು-ಪಾತ್ರ ನಿಭಾಯಿಸುವ ಯುದ್ಧ ವಿಮಾನವಾಗಿದ್ದು, ವಾಯು ರಕ್ಷಣಾ ಕಾರ್ಯಾಚರಣೆಗಳು, ಆಕ್ರಮಣಕಾರಿ ಯುದ್ಧ ಕಾರ್ಯಾಚರಣೆಗಳಿಗೆ ವಿನ್ಯಾಸಗೊಳಿಸಲಾಗಿದೆ. ಇದು ತನ್ನ ವರ್ಗದಲ್ಲಿಯೇ ಅತಿಹಗುರ ಮತ್ತು ಸಣ್ಣ ಯುದ್ಧವಿಮಾನಗಳಲ್ಲಿ ಒಂದಾಗಿದೆ.

ಭಾರತೀಯ ವಾಯುಪಡೆ 2016ರಲ್ಲಿ ಅಧಿಕೃತವಾಗಿ ಪಡೆದುಕೊಂಡಿತು. ಕಳೆದ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ HAL ಜೊತೆ 97 ಹೊಸ ತೇಜಸ್‌ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದು, 2027ರಿಂದ ವಿತರಣೆ ಆರಂಭವಾಗುವ ನಿರೀಕ್ಷೆಯಿದೆ. 2021ರ ಒಪ್ಪಂದದಡಿ ಖರೀದಿಸಲು ನಿಗದಿಪಡಿಸಿದ 83 ತೇಜಸ್ Mk-1A ವಿಮಾನಗಳ ವಿತರಣೆ ಪ್ರಕ್ರಿಯೆ ಈಗಾಗಲೇ ವಿಳಂಬವಾಗಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!