ಮೂತ್ರಪಿಂಡದ (Kidney) ಕಲ್ಲುಗಳು ಅಥವಾ ಕಿಡ್ನಿ ಸ್ಟೋನ್‌ಗಳ ಕುರಿತು ಸಾಮಾನ್ಯವಾಗಿ ಎಲ್ಲರಿಗೂ ಇರುವ ದೊಡ್ಡ ತಪ್ಪು ಕಲ್ಪನೆ ಎಂದರೆ, ಕಡಿಮೆ ನೀರು ಕುಡಿಯುವುದರಿಂದ ಮಾತ್ರ ಈ ಕಲ್ಲುಗಳು ರೂಪುಗೊಳ್ಳುತ್ತವೆ ಎಂಬುದು. ಆದರೆ, ಮೂತ್ರಪಿಂಡ ತಜ್ಞರ (Nephrologist) ಪ್ರಕಾರ, ಮೂತ್ರಪಿಂಡದ ಕಲ್ಲುಗಳು ಕೇವಲ ನೀರಿನ ಸೇವನೆಯ ಕೊರತೆಯಿಂದ ಮಾತ್ರವಲ್ಲದೆ, ಹಲವಾರು ಆಂತರಿಕ, ಆಹಾರ ಮತ್ತು ವೈದ್ಯಕೀಯ ಅಂಶಗಳ ಸಂಯೋಜನೆಯಿಂದ ಉಂಟಾಗುತ್ತವೆ ಎಂದು ತಿಳಿಸಿದ್ದಾರೆ.
ನೆಫ್ರಾಲಜಿಸ್ಟ್ ಡಾ. ಅರ್ಜುನ್ ಸಭರ್ವಾಲ್ ಅವರು ಈ ಬಗ್ಗೆ ಇತ್ತೀಚೆಗೆ ಮಾಹಿತಿ ನೀಡಿದ್ದು, ಮೂತ್ರಪಿಂಡದ ಕಲ್ಲುಗಳ ರಚನೆಯು ಚಯಾಪಚಯ (Metabolic), ಆಹಾರ ಪದ್ಧತಿ (Dietary), ಆನುವಂಶಿಕ (Genetic) ಮತ್ತು ವೈದ್ಯಕೀಯ ಅಂಶಗಳ ಸಂಯೋಜನೆಯಿಂದ ಉಂಟಾಗುತ್ತದೆ ಎಂದು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ (NEJM) ಸೇರಿದಂತೆ ಹಲವಾರು ದೊಡ್ಡ ಅಧ್ಯಯನಗಳು ದೃಢಪಡಿಸಿವೆ ಎಂದು ಹೇಳಿದ್ದಾರೆ. ಹಾಗಾದರೆ, ಕಿಡ್ನಿ ಸ್ಟೋನ್ ಬರಲು ಇರುವ ಬೇರೆ-ಬೇರೆ ಕಾರಣಗಳೇನು ಎಂದು ಇಲ್ಲಿ ವಿವರಿಸಲಾಗಿದೆ
1. ಮೂತ್ರದಲ್ಲಿ ಅಧಿಕ ಕ್ಯಾಲ್ಸಿಯಂ (Hypercalciuria)
ಕಲ್ಲು ರೂಪಗೊಂಡಿರುವ 30-60% ರೋಗಿಗಳಲ್ಲಿ ಈ ಸಮಸ್ಯೆ ಕಂಡುಬರುತ್ತದೆ. ಮೂತ್ರಪಿಂಡಗಳು ಹೆಚ್ಚು ಕ್ಯಾಲ್ಸಿಯಂ ಅನ್ನು ಹೊರಹಾಕಿದಾಗ ಅಥವಾ ದೇಹವು ಆಹಾರದಿಂದ ಅತಿಯಾಗಿ ಕ್ಯಾಲ್ಸಿಯಂ ಹೀರಿಕೊಂಡಾಗ ಕ್ಯಾಲ್ಸಿಯಂ ಆಕ್ಸಲೇಟ್ ಕಲ್ಲುಗಳು ರೂಪುಗೊಳ್ಳುತ್ತವೆ. ಅಧ್ಯಯನಗಳ ಪ್ರಕಾರ,ನೀರು ಸಾಕಷ್ಟು ಕುಡಿದರೂ ಈ ಸಮಸ್ಯೆ ಬರಬಹುದು.
2. ಆಹಾರದಲ್ಲಿ ಆಕ್ಸಲೇಟ್ ಹೆಚ್ಚಳ (Oxalate Overload)
ಪಾಲಕ್, ಬೀಜಗಳು, ಚಾಕೊಲೇಟ್ ಮತ್ತು ಅತಿಯಾದ ವಿಟಮಿನ್ ಸಿ ಪೂರಕಗಳ ಸೇವನೆಯಿಂದ ಆಕ್ಸಲೇಟ್ ಪ್ರಮಾಣ ಹೆಚ್ಚಾಗುತ್ತದೆ. ಈ ಆಕ್ಸಲೇಟ್ ಕ್ಯಾಲ್ಸಿಯಂ ಜೊತೆ ಸೇರಿ ಕಲ್ಲುಗಳನ್ನು ರೂಪಿಸುತ್ತದೆ. ಹಾಗಾಗಿ ಈ ರೀತಿಯ ಆಹಾರಗಳನ್ನು ಮಿತವಾಗಿ ಸೇವಿಸುವುದು ಉತ್ತಮ.
3. ಮೂತ್ರದಲ್ಲಿ ಸಿಟ್ರೇಟ್ ಕೊರತೆ (Low Citrate)
ಸಿಟ್ರೇಟ್ ನೈಸರ್ಗಿಕವಾಗಿ ಕಲ್ಲುಗಳನ್ನು ಕರಗಿಸಲು ಮತ್ತು ಕ್ಯಾಲ್ಸಿಯಂ ಅನ್ನು ಬಂಧಿಸಲು ಸಹಾಯ ಮಾಡುವ ರಕ್ಷಕ. ದೀರ್ಘಕಾಲದ ಭೇದಿ, ಹೆಚ್ಚಿನ ಮಾಂಸದ ಸೇವನೆ ಅಥವಾ ಸೋಂಕುಗಳಿಂದ ಸಿಟ್ರೇಟ್ ಪ್ರಮಾಣ ಕಡಿಮೆಯಾದರೆ ಕಲ್ಲುಗಳು ವೇಗವಾಗಿ ಬೆಳೆಯುತ್ತವೆ.
4. ಯೂರಿಕ್ ಆಮ್ಲ ಮತ್ತು ಪ್ರೋಟೀನ್ ಅಧಿಕ (Uric Acid & Excess Protein)
ಕೆಂಪು ಮಾಂಸ ಮತ್ತು ಸಮುದ್ರಾಹಾರದಂತಹ ಪ್ರೋಟೀನ್-ಭರಿತ ಆಹಾರ ಸೇವನೆಯಿಂದ ಯೂರಿಕ್ ಆಮ್ಲ ಹೆಚ್ಚಾಗಿ ಮೂತ್ರವು ಆಮ್ಲೀಯವಾಗುತ್ತದೆ. ಇದು ಯೂರಿಕ್ ಆಸಿಡ್ ಕಲ್ಲುಗಳಿಗೆ ಮತ್ತು ಇತರ ಕ್ಯಾಲ್ಸಿಯಂ ಕಲ್ಲುಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಮಾಂಸ ಸೇವನೆ ಕಡಿಮೆ ಮಾಡಿ ತರಕಾರಿಗಳನ್ನು ಹೆಚ್ಚಾಗಿ ತಿನ್ನಬೇಕು.
5. ಉಪ್ಪಿನ ಹೆಚ್ಚಳ ಮತ್ತು ಕಡಿಮೆ ಕ್ಯಾಲ್ಸಿಯಂ
ದಿನಕ್ಕೆ 6 ಗ್ರಾಂ ಗಿಂತ ಹೆಚ್ಚು ಉಪ್ಪನ್ನು ಸೇವಿಸಿದರೆ ಮೂತ್ರದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿ ಕಲ್ಲಿನ ಅಪಾಯ ದ್ವಿಗುಣಗೊಳ್ಳುತ್ತದೆ. ಇದರ ಜೊತೆಗೆ, ಆಹಾರದಲ್ಲಿ ಕಡಿಮೆ ಕ್ಯಾಲ್ಸಿಯಂ ಇದ್ದರೆ, ಆಕ್ಸಲೇಟ್ ಕರುಳಿನಲ್ಲಿ ಬಂಧಿಯಾಗದೆ ರಕ್ತಕ್ಕೆ ಸೇರಿ ಕಲ್ಲುಗಳ ರಚನೆಗೆ ಕಾರಣವಾಗುತ್ತದೆ.
6. ವೈದ್ಯಕೀಯ ಪರಿಸ್ಥಿತಿಗಳು ಮತ್ತು ಅನುವಂಶಿಕತೆ
ಬೊಜ್ಜು, ಮಧುಮೇಹ, ಥೈರಾಯ್ಡ್ ಸಮಸ್ಯೆಗಳು ಮತ್ತು ಪದೇ ಪದೇ ಮೂತ್ರ ಸೋಂಕುಗಳು (UTIs) ಮೂತ್ರದ ರಾಸಾಯನಿಕ ಸಮತೋಲನವನ್ನು ಬದಲಿಸುತ್ತವೆ. ಕುಟುಂಬದಲ್ಲಿ ಕಿಡ್ನಿ ಸ್ಟೋನ್ ಇತಿಹಾಸವಿದ್ದರೆ ಅಪಾಯವು 2.5 ಪಟ್ಟು ಹೆಚ್ಚಾಗಿರುತ್ತದೆ. ಕೆಲವು ಔಷಧಿಗಳು ಸಹ ಕಲ್ಲುಗಳಿಗೆ ಕಾರಣವಾಗಬಹುದು.
ಕಿಡ್ನಿ ಕಲ್ಲುಗಳ ಲಕ್ಷಣಗಳಾದ ಬೆನ್ನಿನ ಅಥವಾ ಪಾರ್ಶ್ವದ ತೀವ್ರ ನೋವು, ವಾಂತಿ ಮತ್ತು ಮೂತ್ರದಲ್ಲಿ ರಕ್ತ ಕಂಡರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಕಲ್ಲಿನ ಪ್ರಕಾರವನ್ನು ತಿಳಿದು ಚಿಕಿತ್ಸೆ ಪಡೆದುಕೊಳ್ಳಿ
