ನವದೆಹಲಿ: ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಚುನಾವಣಾ ಆಯೋಗದ ಬಗ್ಗೆ ಪ್ರಶ್ನಿಸಿದಾಗ, ಗೃಹ ಸಚಿವ ಅಮಿತ್ ಶಾ ಇತಿಹಾಸದ ಉದಾಹರಣೆಗಳ ಮೂಲಕ ಉತ್ತರ ನೀಡಿದ್ದಾರೆ. ಸರ್ಕಾರದ ಮೇಲೆ ವೋಟ್ ಕಳ್ಳತನದ ಆರೋಪ ಮಾಡುತ್ತಿರುವ ವಿರೋಧ ಪಕ್ಷಕ್ಕೆ ಅಮಿತ್ ಶಾ ಮೂರು ಐತಿಹಾಸಿಕ ಘಟನೆಗಳನ್ನು ನೆನಪಿಸಿದರು.
ಅಮಿತ್ ಶಾ ವಿವರಿಸಿದ ಮತ ಕಳ್ಳತನದ ಮೂರು ಘಟನೆಗಳು
1. ಮೊದಲ ವೋಟ್ ಕಳ್ಳತನ
ದೇಶ ಸ್ವತಂತ್ರಗೊಂಡ ನಂತರ ಪ್ರಧಾನಿ ಹುದ್ದೆಗೆ ನಡೆದ ಮತದಾನದಲ್ಲಿ, ಕಾಂಗ್ರೆಸ್‌ನ 28 ಪ್ರಾಂತೀಯ ಅಧ್ಯಕ್ಷರು ಸರ್ದಾರ್ ಪಟೇಲ್‌ಗೆ ಮತ ನೀಡಿದರೆ, ಜವಾಹರಲಾಲ್ ನೆಹರೂ ಅವರಿಗೆ ಕೇವಲ 2 ಮತಗಳು ಬಂದಿದ್ದವು. ಬಹುಮತ ಪಟೇಲ್ ಪರವಾಗಿದ್ದರೂ, ಅಧಿಕಾರದ ಹಸ್ತಾಂತರವು ನೆಹರೂ ಅವರ ಪರವಾಗಿ ಆಯಿತು.ಇದು ಒಂದು ರೀತಿಯ ‘ಮತ ಕಳ್ಳತನ’ ಎಂದು ಅಮಿತ್ ಶಾ ಬಣ್ಣಿಸಿದರು.
2. ಇಂದಿರಾ ಗಾಂಧಿಯವರ ಪ್ರಕರಣ
ಇಂದಿರಾ ಗಾಂಧಿಯವರು ಚುನಾವಣೆಯಲ್ಲಿ ಸರಿಯಾಗಿ ಗೆದ್ದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಇದು ಕೂಡ ವೋಟ್ ಕಳ್ಳತನ. ನಂತರ ಈ ಪ್ರಕರಣದಿಂದ ರಕ್ಷಣೆ ಪಡೆಯಲು, ಪ್ರಧಾನಿಗಳ ವಿರುದ್ಧ ಕೇಸ್ ಮಾಡುವಂತಿಲ್ಲ ಎಂದು ಕಾನೂನು ತರಲಾಯಿತು.
3. ಸೋನಿಯಾ ಗಾಂಧಿ ವಿಚಾರ
ಸೋನಿಯಾ ಗಾಂಧಿ ಅವರು ದೇಶದ ನಾಗರಿಕರಾಗುವ ಮುನ್ನವೇ ಮತದಾರರಾಗಿದ್ದರು ಎಂಬ ವಿಚಾರವು ಈಗ ನ್ಯಾಯಾಲಯದಲ್ಲಿದೆ ಎಂದು ಶಾ ಪ್ರಸ್ತಾಪಿಸಿದರು.
ದೇಶದಲ್ಲಿ 73 ವರ್ಷಗಳವರೆಗೆ ಚುನಾವಣಾ ಆಯುಕ್ತರ ನೇಮಕಾತಿಗೆ ಯಾವುದೇ ಕಾನೂನು ಇರಲಿಲ್ಲ. ಆಗಿದ್ದ ನೇಮಕಾತಿಗಳೆಲ್ಲ ಪ್ರಧಾನಮಂತ್ರಿಗಳ ನೇರ ನಿರ್ಧಾರದಿಂದ ಆಗಿದ್ದವು. 55 ವರ್ಷಗಳ ಕಾಲ ಕಾಂಗ್ರೆಸ್ ಆಳಿದಾಗ ಈ ಪ್ರಶ್ನೆ ಇರಲಿಲ್ಲ, ಆದರೆ ಈಗ ಪ್ರಧಾನಿ ಮೋದಿ ಅವರು ಕಾನೂನು ಪ್ರಕಾರ ಮಾಡಿದರೆ ಪ್ರಶ್ನೆ ಮಾಡಲಾಗುತ್ತಿದೆ ಎಂದು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದರು.
