ಹುಬ್ಬಳ್ಳಿ: ಪ್ರೀತಿಸಿ ಮದುವೆಯಾಗಿದ್ದಕ್ಕೆ ಗರ್ಭಿಣಿ ಮಗಳನ್ನೇ ಹೆತ್ತ ತಂದೆಯೇ ಕೊಚ್ಚಿ ಕೊಲೆ ಮಾಡಿರುವ ಘಟನೆ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ. ಹುಬ್ಬಳ್ಳಿಯ ಇನಾಮ್ ವೀರಾಪುರ ಗ್ರಾಮದ 19 ವರ್ಷದ ಮಾನ್ಯಾ, ತನ್ನ ತಂದೆ ಪ್ರಕಾಶಗೌಡ ಪಾಟೀಲ್ ನಡೆಸಿದ ಕೊಡಲಿ ದಾಳಿಗೆ ಬಲಿಯಾಗಿದ್ದು, ಇಂದು ಆಕೆಯ ಅಂತ್ಯಕ್ರಿಯೆ ಪೊಲೀಸ್ ಬಂದೋಬಸ್ತ್‌ನಲ್ಲಿ ನೆರವೇರಿದೆ.
ಪತಿಯಿಂದಲೇ ಶವಸಂಸ್ಕಾರ
ಆರು ತಿಂಗಳ ಗರ್ಭಿಣಿಯಾಗಿದ್ದ ಮಾನ್ಯಾಳ ಅಂತಿಮ ದರ್ಶನಕ್ಕೆ ಆಕೆಯ ಪೋಷಕರು ಸುಳಿಯಲಿಲ್ಲ. ಹುಟ್ಟಿಸಿ ಬೆಳೆಸಿದ ಮಗಳು ಶವವಾಗಿ ಬಿದ್ದಿದ್ದರೂ, ಜಾತಿ ಅಮಲಿನಲ್ಲಿದ್ದ ತಂದೆ ಮತ್ತು ಕುಟುಂಬಸ್ಥರು ಮುಖ ನೋಡಲು ಬರಲಿಲ್ಲ. ಅಂತಿಮವಾಗಿ ಪತಿ ವಿವೇಕಾನಂದ ದೊಡ್ಮನಿ ಅವರೇ ಮಾನ್ಯಾಳ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಮಡದಿಯ ಅಗಲಿಕೆಯಿಂದ ವಿವೇಕಾನಂದ ಗೋಳಾಡುತ್ತಿದ್ದ ದೃಶ್ಯ ಅಲ್ಲಿದ್ದವರ ಕಣ್ಣಾಲಿಗಳನ್ನು ಒದ್ದೆ ಮಾಡಿತು.
ಘಟನೆಯ ಹಿನ್ನೆಲೆ
ಮಾನ್ಯಾ ಮತ್ತು ವಿವೇಕಾನಂದ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮಾನ್ಯಾ ಲಿಂಗಾಯತ ಸಮುದಾಯದವಳಾಗಿದ್ದರೆ, ವಿವೇಕಾನಂದ ದಲಿತ ಸಮುದಾಯಕ್ಕೆ ಸೇರಿದವನು. ಇವರ ಮದುವೆಗೆ ಮಾನ್ಯಾ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಹೆತ್ತವರ ವಿರೋಧದ ನಡುವೆಯೂ ಈ ಜೋಡಿ ಕಳೆದ ಜೂನ್ 19ರಂದು ರಿಜಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು. ಮದುವೆಯ ನಂತರ ಹಾವೇರಿಯಲ್ಲಿದ್ದ ಇವರು, ಗರ್ಭಿಣಿಯಾಗಿದ್ದ ಮಾನ್ಯಾಳ ಆರೋಗ್ಯ ತಪಾಸಣೆಗಾಗಿ ಇತ್ತೀಚೆಗಷ್ಟೇ ಸ್ವಗ್ರಾಮಕ್ಕೆ ಮರಳಿದ್ದರು.
ಭಾನುವಾರ ಸಂಜೆ ವಿವೇಕಾನಂದನ ಮನೆ ಮೇಲೆ ದಾಳಿ ಮಾಡಿದ ಪ್ರಕಾಶಗೌಡ ಪಾಟೀಲ್ ಮತ್ತು ಆತನ ಸಂಬಂಧಿಗಳು, ಮಾನ್ಯಾ ಗರ್ಭಿಣಿ ಎಂಬ ಕನಿಷ್ಠ ಕರುಣೆಯೂ ಇಲ್ಲದೆ ಕೊಡಲಿಯಿಂದ ತಲೆ ಮತ್ತು ದೇಹಕ್ಕೆ ಮನಬಂದಂತೆ ಕೊಚ್ಚಿದ್ದಾರೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಮಾನ್ಯಾಳನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆಯನ್ನು ಖಂಡಿಸಿ ದಲಿತ ಪರ ಸಂಘಟನೆಗಳು ಹುಬ್ಬಳ್ಳಿಯ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದವು. “ನಮಗೆ ಪ್ರೀತಿಗಿಂತ ಜಾತಿಯೇ ದೊಡ್ಡದಾಯಿತು” ಎಂದು ಪತಿ ವಿವೇಕಾನಂದ ಬಿಕ್ಕಿ ಬಿಕ್ಕಿ ಅಳುತ್ತಾ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಸದ್ಯ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಮಾನ್ಯಾಳ ತಂದೆ ಪ್ರಕಾಶಗೌಡ ಪಾಟೀಲ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರೀತಿಸಿದವನ ಜೊತೆ ಸುಂದರ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಾನ್ಯಾ, ಹೆತ್ತವನ ಕೈಯಲ್ಲೇ ಹತ್ಯೆಯಾಗಿದ್ದು ಮಾತ್ರ ವಿಪರ್ಯಾಸ.
