ತಂಬಾಕು ಉತ್ಪನ್ನಗಳ ಬಳಕೆದಾರರಿಗೆ ಕೇಂದ್ರ ಸರ್ಕಾರ ಭಾರಿ ದರ ಏರಿಕೆಯ ಬಿಸಿ ಮುಟ್ಟಿಸಿದೆ. ಫೆಬ್ರವರಿ 1 ರಿಂದ ಜಾರಿಗೆ ಬರುವಂತೆ ಸಿಗರೇಟ್, ಪಾನ್ ಮಸಾಲಾ ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಹಾಗೂ ನೂತನ ‘ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್’ ವಿಧಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಜಿಎಸ್‌ಟಿ ದರಗಳ ಜೊತೆಗೆ ಈ ಹೊಸ ತೆರಿಗೆಗಳು ಸೇರ್ಪಡೆಯಾಗುವುದರಿಂದ ಮುಂದಿನ ತಿಂಗಳಿನಿಂದ ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳ ಬೆಲೆ ಮುಗಿಲು ಮುಟ್ಟಲಿದೆ.
ಫೆಬ್ರವರಿ 1 ರಿಂದ, ಪಾನ್ ಮಸಾಲಾ, ಸಿಗರೇಟ್, ತಂಬಾಕು ಮತ್ತು ಉತ್ಪನ್ನಗಳ ಮೇಲೆ ಶೇ. 40 ರಷ್ಟು ಜಿಎಸ್‌ಟಿ ದರವನ್ನು ಹೆಚ್ಚಿಸಲಾಗುವುದು ಮತ್ತು ಬೀಡಿಗಳ ಮೇಲೆ ಶೇ. 18 ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು ಏರಿಸಲಾಗುವುದೆಂದು ಎಂದು ಸರ್ಕಾರಿ ಅಧಿಸೂಚನೆ ತಿಳಿಸಿದೆ.
ಇದರ ಜೊತೆಗೆ ಪಾನ್ ಮಸಾಲಾ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸುವ ಜತೆಗೆ ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸಲಾಗುವುದು ಎಂದು ಹೇಳಲಾಗಿದೆ. ಹಣಕಾಸು ಸಚಿವಾಲಯವು ಬಾಯಲ್ಲಿ ಅಗಿಯುವ ತಂಬಾಕು ಮತ್ತು ಗುಟ್ಕಾ ಪ್ಯಾಕಿಂಗ್ ಯಂತ್ರಗಳ ನಿಯಮ (ಸಾಮರ್ಥ್ಯ ನಿರ್ಣಯ ಮತ್ತು ಸುಂಕ ಸಂಗ್ರಹ), 2026 ರ ಅಡಿಯಲ್ಲಿ ಈ ಅಧಿಸೂಚನೆಯನ್ನು ಹೊರಡಿಸಿದೆ.
ಪಾನ್ ಮಸಾಲಾ ತಯಾರಿಕೆ ಮತ್ತು ತಂಬಾಕಿನ ಮೇಲಿನ ಅಬಕಾರಿ ಸುಂಕದ ಮೇಲೆ ಹೊಸ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲು ಅನುಮತಿಸುವ ಎರಡು ಮಸೂದೆಗಳನ್ನು ಸಂಸತ್ತು ಡಿಸೆಂಬರ್‌ನಲ್ಲಿ ಅನುಮೋದಿಸಿತ್ತು. ಈ ಸುಂಕಗಳ ಅನುಷ್ಠಾನ ದಿನಾಂಕವಾಗಿ ಫೆಬ್ರವರಿ 1 ನ್ನು ಸರ್ಕಾರ ಬುಧವಾರ ಪ್ರಕಟಿಸಿದೆ. ಪ್ರಸ್ತುತ ಅತ್ಯಂತ ಕಡಿಮೆ ದರದಲ್ಲಿ ಮಾರುಕಟ್ಟೆಯಲ್ಲಿರುವ ತಂಬಾಕು ಉತ್ಪನ್ನಗಳ ನೂತನ ದರವು ಫೆಬ್ರವರಿ 1 ರಿಂದ ಮುಗಿಲು ಮುಟ್ಟುವ ಸಾಧ್ಯತೆ ಇದೆ.
