ಬೆಂಗಳೂರು: ಗ್ರಾಮೀಣ ಭಾಗದ ಬಡ ಜನರ ಉದ್ಯೋಗದ ಹಕ್ಕನ್ನು ಖಾತರಿಪಡಿಸುವ ಮನರೇಗಾ ಯೋಜನೆಯನ್ನು ಉಳಿಸುವ ಸಲುವಾಗಿ ಇಂದು ‘ರಾಜಭವನ ಚಲೋ’ ಹಮ್ಮಿಕೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿ ತಾಲ್ಲೂಕಿನಲ್ಲೂ ಕನಿಷ್ಠ ಐದು ಕಿಲೋಮೀಟರ್ ಪಾದಯಾತ್ರೆ ನಡೆಸಲಾಗುವುದು ಮತ್ತು ಪ್ರತಿ ಪಂಚಾಯತಿ ಮಟ್ಟದಲ್ಲೂ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು. 20 ವರ್ಷಗಳ ಹಿಂದೆ ಸೋನಿಯಾ ಗಾಂಧಿ ಅವರ ನಾಯಕತ್ವದಲ್ಲಿ ಜಾರಿಗೆ ಬಂದಿದ್ದ ಸಾಂವಿಧಾನಿಕ ಹಕ್ಕನ್ನು ನಾಶ ಮಾಡಲು ಕೇಂದ್ರ ಸರ್ಕಾರ ಹೊರಟಿರುವುದು ಆಶ್ಚರ್ಯಕರವಾಗಿದೆ. ಈ ಯೋಜನೆಯು ಗ್ರಾಮೀಣ ಭಾಗದ ಜನರ ಜೀವನಕ್ಕೆ ಖಾತ್ರಿ ನೀಡಿತ್ತು, ಆದರೆ ಈಗ ಈ ಹಕ್ಕು ಮೊಟಕಾಗಿದೆ. ಹಿಂದೆ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹೇಗೆ ಹಿಂಪಡೆಯಿತೋ, ಅದೇ ರೀತಿ ನರೇಗಾಕ್ಕೆ ಧಕ್ಕೆ ತರುವ ಹೊಸ ಕಾಯ್ದೆಗಳನ್ನೂ ಹಿಂಪಡೆಯುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಅವರು ಎಚ್ಚರಿಸಿದರು.
ನರೇಗಾ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದ ಡಿ.ಕೆ. ಶಿವಕುಮಾರ್, ಅಕ್ರಮ ನಡೆದಿದ್ದರೆ ತನಿಖೆ ಮಾಡಲಿ ಅಥವಾ ಬಹಿರಂಗವಾಗಿ ತಮ್ಮೊಂದಿಗೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು. ಅಕ್ರಮವಾಗಿದ್ದರೆ ಕನಕಪುರ ತಾಲ್ಲೂಕಿಗೆ ಪ್ರಶಸ್ತಿ ಬಂದಿದ್ದು ಹೇಗೆ ಎಂದು ಪ್ರಶ್ನಿಸಿದ ಅವರು, ಬಡವರ ಹೊಟ್ಟೆ ಹೊರೆಯುವ ಯೋಜನೆಗೆ ಅಡ್ಡಿಪಡಿಸಬೇಡಿ ಎಂದರು. ಇದೇ ವೇಳೆ 2028ಕ್ಕೆ ಮುಖ್ಯಮಂತ್ರಿಯಾಗುತ್ತೇನೆ ಎನ್ನುವ ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ತಾವು ರಾಜಕಾರಣ ಮಾಡುತ್ತಿರುವುದು ಈ ನಾಡಿನ ಜನತೆಯ ಸೇವೆಗಾಗಿಯೇ ಹೊರತು ಕೇವಲ ಒಂದು ಕುಟುಂಬಕ್ಕಲ್ಲ ಎಂದು ಟಾಂಗ್ ನೀಡಿದರು. ರಾಜ್ಯಪಾಲರ ಭಾಷಣದ ಬಗ್ಗೆ ಮಾತನಾಡುತ್ತಾ, ಸರ್ಕಾರ ನೀಡಿದ ಭಾಷಣವನ್ನು ಓದುವುದು ರಾಜ್ಯಪಾಲರ ಸಾಂವಿಧಾನಿಕ ಕರ್ತವ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕನಕಪುರದಲ್ಲಿ ಆಯೋಜಿಸಲಾಗಿರುವ ‘ಕನಕೋತ್ಸವ’ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಡಿಸಿಎಂ, ಸುಮಾರು 72 ಸಾವಿರ ಮಹಿಳೆಯರು ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ರಂಗೋಲಿ ಬಿಡಿಸಿರುವುದು ಅಭೂತಪೂರ್ವವಾಗಿದೆ ಎಂದರು. ರಾಜ್ಯದ ಎಲ್ಲಾ ತಾಲ್ಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಈ ಕಾರ್ಯಕ್ರಮವನ್ನು ವೀಕ್ಷಿಸಲು ಬರಬೇಕು ಎಂದು ಆಹ್ವಾನ ನೀಡಿದರು. ಈ ಮೂಲಕ ಹೊಸ ಪೀಳಿಗೆಗೆ ಸಂವಿಧಾನದ ಅರಿವು ಮೂಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಮತ್ತು ಸಂವಿಧಾನದ ರಕ್ಷಣೆಗೆ ತಮ್ಮ ಸರ್ಕಾರ ಸದಾ ಬದ್ಧವಾಗಿದೆ ಎಂದು ಡಿ.ಕೆ. ಶಿವಕುಮಾರ್ ಪುನರುಚ್ಚರಿಸಿದರು
