Tuesday, April 28, 2026
Homeಕ್ರೈಮ್ಚಿಕ್ಕಮಗಳೂರಲ್ಲಿ ವರುಣನ ಆರ್ಭಟಕ್ಕೆ ಜನ ತತ್ತರ: ರಸ್ತೆಗೆ ಅಡ್ಡಲಾಗಿ ಬಿದ್ದಿರುವ ವಿದ್ಯುತ್ ಕಂಬಗಳು

ಚಿಕ್ಕಮಗಳೂರಲ್ಲಿ ವರುಣನ ಆರ್ಭಟಕ್ಕೆ ಜನ ತತ್ತರ: ರಸ್ತೆಗೆ ಅಡ್ಡಲಾಗಿ ಬಿದ್ದಿರುವ ವಿದ್ಯುತ್ ಕಂಬಗಳು

 ಕಾಫಿನಾಡು ಚಿಕ್ಕಮಗಳೂರಲ್ಲಿ ವರುಣನ ಆರ್ಭಟಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಮಲೆನಾಡಿಗರಿಗೆ ಮಳೆರಾಯ ತಂಪೆರೆದಿದ್ದರೂ ಕೂಡ ಬಿರುಗಾಳಿ ಮತ್ತು ಆಲಿಕಲ್ಲಿನ ಆರ್ಭಟ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಆಲ್ದೂರು ಮತ್ತು ಮೂಡಿಗೆರೆ ಭಾಗದಲ್ಲಿ ಪ್ರಕೃತಿ ವಿಕೋಪಕ್ಕೆ ರೈತರು ಕಣ್ಣೀರು ಹಾಕುವಂತಾಗಿದ್ದು, ನೂರಾರು ಹಳ್ಳಿಗಳು ಕತ್ತಲೆಯಲ್ಲಿ ಮುಳುಗಿವೆ.

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸುತ್ತಮುತ್ತಲಿನ ಬಿರುಗಾಳಿಯ ಅನಾಹುತಕ್ಕೆ ಬರೋಬ್ಬರಿ ಇಪ್ಪತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಒಂದರ ಹಿಂದೆ ಒಂದರಂತೆ ರಸ್ತೆಗೆ ಉರುಳಿವೆ. ಹೀಗಾಗಿ, ಸುಮಾರು 60 ಕಿಮೀ ವ್ಯಾಪ್ತಿಯ ಹತ್ತಾರು ಹಳ್ಳಿಗಳು ಕತ್ತಲೆಯಲ್ಲಿಯೇ ಮುಳುಗಿವೆ. ಇದರಿಂದಾಗಿ ಮೆಸ್ಕಾಂಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಪ್ರಮುಖವಾಗಿ ಚಿಕ್ಕಮಗಳೂರು ತಾಲೂಕು, ವಸ್ತಾರೆ, ಆಲ್ದೂರು, ಕೂದುವಳ್ಳಿ, ಮೂಡಿಗೆರೆ, ಕೊಟ್ಟಿಗೆಹಾರ, ಸಾರಗೋಡು, ಕುಂದೂರು, ಬಾಳೆಹೊನ್ನೂರು, ಕಣತಿ, ದೇವರ ಮನೆ, ಕೊಪ್ಪ, ಜಯಪುರ, ಎನ್ಆರ್ ಪುರ, ಸುತ್ತಮುತ್ತಲೂ ಧಾರಾಕಾರ ಮಳೆ ಸುರಿದಿದೆ. ಅದರಲ್ಲೂ ಆಲಿಕಲ್ಲು ಮಳೆ ಬೀಳುತ್ತಿರುವುದು ಕಾಫಿ ಬೆಳೆಗಾರರಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ.

ಬೇಸಿಗೆಯಲ್ಲೂ ಕೂಡ ವರುಣ ದೇವನ ಆರ್ಭಟಕ್ಕೆ ಮಲೆನಾಡು ಕಂಗಾಲಾಗಿದೆ. ಮಳೆರಾಯನ ಈ ವಿಚಿತ್ರ ಆಟ ಕಾಫಿನಾಡ ಜನರಲ್ಲಿ ಅಚ್ಚರಿ ಮತ್ತು ಆತಂಕ ಎರಡನ್ನೂ ಏಕಕಾಲಕ್ಕೆ ಸೃಷ್ಟಿಸಿದೆ. ಮಲೆನಾಡಲ್ಲಿ ಆಗಾಗ ಸುರಿಯುತ್ತಿರುವ ಆಲಿಕಲ್ಲು ಮಳೆ ಕಾಫಿ ಹಾಗೂ ಅಡಿಕೆ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!