ಚಿಕ್ಕಮಗಳೂರು: ಜಿಲ್ಲೆಯ ಕಾಫಿ ಬೆಳೆಗೆ ಅತ್ಯಂತ ಪ್ರಸಿದ್ಧಿ. ವರ್ಷಪೂರ್ತಿ ಸಮೃದ್ಧ ಮಳೆ ಈ ಭಾಗದಲ್ಲಿ ಬೀಳುತ್ತದೆ. ಆದರೆ ಈ ವರ್ಷ ಮಳೆ ಕೈ ಕೊಟ್ಟಿದೆ. ರೈತರು ಕಂಗಾಲಾಗಿದ್ದಾರೆ.
ಕಾಫಿನಾಡಿನಲ್ಲಿ ಈ ಬಾರಿ ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆಯಾಗಿದ್ದು ಕಡೂರು ತಾಲೂಕಿನ ಪ್ರಮುಖ ಜಲಮೂಲಗಳಾದ ಅಯ್ಯನಕೆರೆ ಹಾಗೂ ಮದಗದಕೆರೆ ಇನ್ನೂ ಭರ್ತಿಯಾಗದೇ ಇರುವುದು ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ. ಸುಮಾರು 53 ಸಾವಿರ ಎಕರೆ ಕೃಷಿ ಭೂಮಿಗೆ ನೀರಾವರಿ ಒದಗಿಸುವ ಈ ಬೃಹತ್ ಕೆರೆಗಳು ತುಂಬಲೆಂದು ಗ್ರಾಮಸ್ಥರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದರು.
ಈ ಹಿನ್ನೆಲೆಯಲ್ಲಿ ಕಡೂರು ತಾಲೂಕಿನ ಹಸ್ತಿನಾಪುರ ಗ್ರಾಮದ ಸುಮಾರು 180 ಮನೆಗಳ ನಿವಾಸಿಗಳು ಹಾಗೂ 10 ಗ್ರಾಮಗಳ ಜನರು ಒಂದಾಗಿ ಸೇರಿ ಶಕುನ ರಂಗನಾಥ ಸ್ವಾಮಿ ಮತ್ತು ಸರಪಳಿ ಕೆಂಚರಾಯ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು. ಶಕುನ ರಂಗನಾಥ ಸ್ವಾಮಿಗೆ 101 ಎಡೆ ನೈವೇದ್ಯ ಹಾಗೂ ಬಾಳೆಹಣ್ಣಿನ ರಸಾಯನ ಸಮರ್ಪಿಸಿ ಪೂಜೆ ಸಲ್ಲಿಸಲಾಯಿತು. ಜೊತೆಗೆ ಸರಪಳಿ ಕೆಂಚರಾಯನಿಗೆ ಮೂರು ಕುರಿಗಳನ್ನು ಸಮರ್ಪಿಸಿ ಸಾಂಪ್ರದಾಯಿಕ ವಿಧಿವಿಧಾನಗಳ ಮೂಲಕ ಮಳೆಗಾಗಿ ಪ್ರಾರ್ಥಿಸಲಾಯಿತು. ಮಡಿವಾಳ ಸಮಾಜದ ದಾಸಪ್ಪ ಅವರ ನೇತೃತ್ವದಲ್ಲಿ ವಿಶೇಷ ಪೂಜಾ ವಿಧಿಗಳು ನೆರವೇರಿದವು.
