ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಸಂಭವಿಸಿದ ಸಾಲು ಸಾಲು ರಸ್ತೆ ಅಪಘಾತಗಳಲ್ಲಿ 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್‌ಗೆ ಓಮಿನಿ ಕಾರು ಡಿಕ್ಕಿ: ಧರ್ಮಸ್ಥಳದಿಂದ ಚಿತ್ರದುರ್ಗಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಹಾಂದಿ ಸಮೀಪದ ಜಲೀಲ್ ನರ್ಸರಿ ಬಳಿ ಎದುರಿನಿಂದ ಬಂದ ಮಾರುತಿ ಓಮಿನಿ ಕಾರ್ ಡಿಕ್ಕಿಯಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಏಳು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅವರನ್ನು ಮೂಡಿಗೆರೆ ಎಂಜಿಎಂ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಆಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರ್ಲೆ ಬಳಿ ಬೈಕ್ ಅಪಘಾತ: ಚಿಕ್ಕಮಗಳೂರಿನ ಹರಿಹರದಹಳ್ಳಿ ಗ್ರಾಮದ ಮರ್ಲೆ ಮುಖ್ಯರಸ್ತೆಯಲ್ಲಿ ಸೆಂಟ್ರಿಂಗ್ ಕೆಲಸ ಮುಗಿಸಿ ವಾಪಸ್ ಆಗುತ್ತಿದ್ದ ಸಿ.ಸಿ. ಬಾಲಕೃಷ್ಣ ಎಂಬುವರ ಬೈಕ್‌ಗೆ ಮಂಜುನಾಥ್ ಎಂಬುವರು ಚಲಾಯಿಸುತ್ತಿದ್ದ ಬೈಕ್ ಡಿಕ್ಕಿಯಾಗಿದೆ. ತಲೆ ಹಾಗೂ ಎದೆ ಭಾಗಕ್ಕೆ ಗಂಭೀರ ಪೆಟ್ಟು ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಬಾಲಕೃಷ್ಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಮಹಾಲಕ್ಷ್ಮಿ ಮಂಜಪ್ಪ ಮಲ್ಟಿ ಆಸ್ಪತ್ರೆಗೆ ಸೇರಿಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೋಳಾರಾಮೇಶ್ವರ ಬಳಿ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ: ಬೋಳಾರಾಮೇಶ್ವರ ದೇವಸ್ಥಾನದ ಹಿಂಭಾಗದ ರಸ್ತೆಯಲ್ಲಿ ಟೈಲರ್ ಅಂಗಡಿಗೆ ಕೆಲಸಕ್ಕೆ ತೆರಳುತ್ತಿದ್ದ ರಾಘವೇಂದ್ರ ಎಂಬುವರ ಬೈಕ್‌ಗೆ ಎದುರು ದಿಕ್ಕಿನಿಂದ ಬಂದ ಅಪರಿಚಿತ ಬೈಕ್ ಡಿಕ್ಕಿಯಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದೇರಲಕಟ್ಟೆಯ ಏನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ನೋಂದಾಯಿಸಲಾಗಿದೆ.
ಜನ್ನಾಪುರದಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಬೈಕ್: ಜನ್ನಾಪುರ ಬಳಿ ಎನ್‌ಹೆಚ್ 73 ರಸ್ತೆಯನ್ನು ದಾಟುತ್ತಿದ್ದ ಬಸವರಾಜು ಎಂಬುವರಿಗೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಅವರನ್ನು ಚಿಕ್ಕಮಗಳೂರಿನ ಆಶ್ರಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ನೋಂದಾಯಿಸಲಾಗಿದೆ.
ವೈಮಲ್ಲಾಪುರ ಗೇಟ್ ಬಳಿ ಕಾರು-ಸ್ಕೂಟರ್ ಡಿಕ್ಕಿ: ದಂಪತಿಗೆ ಗಾಯ: ವೈಮಲ್ಲಾಪುರ ಗ್ರಾಮದ ಹಾಲಿನ ಡೈರಿ ಬಳಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಜಯಣ್ಣ ಹಾಗೂ ನಿರ್ಮಲ ದಂಪತಿಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ನಿರ್ಮಲ ಹಾಗೂ ಜಯಣ್ಣ ದಂಪತಿಯನ್ನು ಕಡೂರಿನ ಆರ್ತ್ರೋ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಂಗಟಗೆರೆ ಪೊಲೀಸ್ ಠಾಣೆಯಲ್ಲಿ ಬಸವರಾಜ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
