ಮೂಡಿಗೆರೆ: ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಒಂಟಿ ಕಾಡಾನೆ ದಿಢೀರ್ ಪ್ರತ್ಯಕ್ಷವಾಗಿ ರಸ್ತೆ ಮಧ್ಯೆ ನಿಂತುಕೊಂಡಿದ್ದರಿಂದ ವಾಹನ ಸವಾರರು ಆತಂಕಗೊಂಡಿದ್ದು, ಕೆಲ ಸಮಯ ಸಂಚಾರ ದಟ್ಟಣೆ ಉಂಟಾಯಿತು.
ಗಜರಾಜು ರಸ್ತೆಯಲ್ಲಿ ನಿಂತಿದ್ದರಿಂದ ಸುಮಾರು ಒಂದು ಗಂಟೆಗೂ ಅಧಿಕ ಕಾಲ ವಾಹನಗಳು ಸಾಲುಗಟ್ಟಿ ನಿಂತು ಟ್ರಾಫಿಕ್ ಜಾಮ್ ಉಂಟಾಯಿತು
ಮಳೆಗಾಲ ಆರಂಭವಾಗಿರುವುದರಿಂದ ಘಾಟಿಯಲ್ಲಿ ದಟ್ಟ ಮಂಜು ಇರುತ್ತದೆ. ಈ ಸಮಯದಲ್ಲಿ ರಸ್ತೆ ಕಾಣದಂತಹಾ ಸ್ಥಿತಿ ಇರುತ್ತದೆ. ಇಂತಹ ಸಂದರ್ಭದಲ್ಲಿ ಕಾಡುಪ್ರಾಣಿಗಳ ಚಲನವಲನಗಳು ತಕ್ಷಣಕ್ಕೆ ಗಮನಕ್ಕೆ ಬರುವುದಿಲ್ಲ. ಆದರೂ, ಈ ಮಾರ್ಗದಲ್ಲಿ ಸಂಚರಿಸುವ ಸಾವಿರಾರು ಪ್ರವಾಸಿಗರು ಫೋಟೋ ಹಾಗೂ ಸೆಲ್ಫಿಗಾಗಿ ವಾಹನಗಳನ್ನು ನಿಲ್ಲಿಸಿ ಕೆಳಗಿಳಿಯುತ್ತಿರುವುದು ಅನಾಹುತಕ್ಕೆ ಕಾರಣವಾಗಬಹುದು.
ಕೆಲ ಪ್ರವಾಸಿಗರು ಫೋಟೋಗಾಗಿ ಬಂಡೆ ಮೇಲೆ ಹತ್ತುತ್ತಾರೆ. ಈ ವೇಳೆ ಪ್ರಾಣಿಗಳು ದಾಳಿ ಮಾಡುವ ಸಾಧ್ಯತೆ ಇರಲಿದೆ. ಜಾರಿ ಬೀಳುವ ಸಂಭವವೂ ಇರುತ್ತದೆ. ಪ್ರಾವಾಸಿಗರು ಜಾಗ್ರತೆಯಿಂದ ಸಂಚರಿಸಬೇಕು ಎಂದು ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
