2019ರಿಂದಲೂ ಗುಂಡಿ ಬಿದ್ದಿರೋ ರಸ್ತೆ; ನಾಯಕರ ನಿರ್ಲಕ್ಷ್ಯ, ಶಾಲಾ ಮಕ್ಕಳ ಅಸಹಾಯಕ ಪಯಣ!
ಕೊಟ್ಟಿಗೆಹಾರ: 2019ರ ಭೀಕರ ಪ್ರವಾಹದಲ್ಲಿ ಕೊಚ್ಚಿಹೋದ ರಸ್ತೆಗಳು ಬರೋಬ್ಬರಿ ಏಳು ವರ್ಷ ಕಳೆದರೂ ಸುಧಾರಿಸಿಲ್ಲ.
ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಹಾಗೂ ಮೂಡಿಗೆರೆ ತಾಲೂಕಿನ ಮಲೆಮನೆ, ಮಧುಗುಂಡಿ, ಕೆಳಗೂರು, ಜಾವಳಿ ಹಾಗೂ ಮೇಗೂರು ಭಾಗದ ಜನರು ನಿತ್ಯವೂ ನರಕಯಾತನೆ ಅನುಭವಿಸುತ್ತಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶತಮಾನದ ಮಳೆಗೆ ತತ್ತರಿಸಿದ್ದ ಮಲೆನಾಡು
2019ರಲ್ಲಿ ಚಿಕ್ಕಮಗಳೂರು ಜಿಲ್ಲೆ ಕಂಡ ಶತಮಾನದ ಭೀಕರ ಮಳೆಗೆ ಇಡೀ ಮಲೆನಾಡು ತತ್ತರಿಸಿಹೋಗಿತ್ತು. ಒಂದೇ ರಾತ್ರಿಯಲ್ಲಿ ಬಿದ್ದ ಬರೋಬ್ಬರಿ 22 ಇಂಚು ಮಳೆಗೆ ಗುಡ್ಡಗಳು ಕುಸಿದು, ಹಲವು ಗ್ರಾಮಗಳು ಅವಶೇಷಗಳೂ ಸಿಗದಂತೆ ಕೊಚ್ಚಿ ಹೋಗಿದ್ದವು.
ಈ ವೇಳೆ ಹಾನಿಗೊಳಗಾದ 6 ರಿಂದ 8 ಕಿ.ಮೀ. ವ್ಯಾಪ್ತಿಯ ಜಾವಳಿ, ಮಲೆಮನೆ, ಮೇಗೂರು ಗ್ರಾಮಗಳ ಮುಖ್ಯ ರಸ್ತೆಗಳು ಸಂಪೂರ್ಣವಾಗಿ ಧ್ವಂಸಗೊಂಡಿದ್ದವು.
ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರು ಸಮಸ್ಯೆ ಬಗೆಹರಿದಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
