ಕೊಪ್ಪ: ತಾಲೂಕಿನ ಅಸಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಮಳೆಗಾಲದಲ್ಲಿಯೇ ಟಿಂಬರ್‌ಗಳನ್ನು ಕಡಿದು ಸಾಗಿಸುತ್ತಿರುವುದರಿಂದ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಸಾರ್ವಜನಿಕರು ಹಾಗೂ ಭಕ್ತಾದಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಟಿಂಬರ್ ಕಡಿದು ಸಾಗಿಸುವ ಸಂದರ್ಭದಲ್ಲಿ ಭಾರಿ ವಾಹನಗಳ ಸಂಚಾರದಿಂದ ರಸ್ತೆಗಳು ಕೆಸರುಮಯವಾಗಿ, ಗುಂಡಿಗಳು ನಿರ್ಮಾಣಗೊಂಡಿವೆ. ಇದರಿಂದ ಗ್ರಾಮಸ್ಥರು ಸಂಚಾರ ನಡೆಸುವುದು ಕಷ್ಟಕರವಾಗಿದೆ. ವಿಶೇಷವಾಗಿ ಗ್ರಾಮದ ನೀರುಳ್ಳಿ ದೇವಸ್ಥಾನ ಹಾಗೂ ಚೌಡೇಶ್ವರಿ ದೇವಸ್ಥಾನಗಳಿಗೆ ತೆರಳುವ ಭಕ್ತಾದಿಗಳಿಗೆ ತೊಂದರೆಯಾಗುತ್ತಿದೆ.
ಅಲ್ಲದೆ, ಹೊಸಕೊಪ್ಪ ನ್ಯಾಯಬೆಲೆ ಅಂಗಡಿಗೆ ಪಡಿತರ ಪಡೆಯಲು ತೆರಳುವ ಗ್ರಾಮಸ್ಥರೂ ಹದಗೆಟ್ಟ ರಸ್ತೆಯಿಂದಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ವೃದ್ಧರು, ಮಹಿಳೆಯರು ಹಾಗೂ ದ್ವಿಚಕ್ರ ವಾಹನ ಸವಾರರು ಸಂಚರಿಸಲು ಆತಂಕಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮಳೆಗಾಲದಲ್ಲಿ ಟಿಂಬರ್ ಕಡಿದು ಸಾಗಣೆ ಮಾಡುತ್ತಿರುವುದೇ ರಸ್ತೆಗಳು ಹದಗೆಡಲು ಪ್ರಮುಖ ಕಾರಣವಾಗಿದ್ದು, ಅರಣ್ಯ ಇಲಾಖೆಯು ಸಾರ್ವಜನಿಕರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಟಿಂಬರ್ ಸಾಗಣೆಯಿಂದ ಹಾನಿಗೊಳಗಾಗಿರುವ ರಸ್ತೆಯನ್ನು ತಕ್ಷಣ ದುರಸ್ತಿಪಡಿಸಿ, ಗ್ರಾಮಸ್ಥರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
