Thursday, August 20, 2026
Homeಕ್ರೈಮ್IPS Uday Krishna Reddy Arrest: ತರಬೇತಿಯಲ್ಲಿದ್ದಾಗ ಕರ್ನಾಟಕದ IPS ಬ್ಯಾಚ್‌ಮೇಟ್‌ಗೆ ಲೈಂಗಿಕ ಕಿರುಕುಳ: ಆಂಧ್ರದ...

IPS Uday Krishna Reddy Arrest: ತರಬೇತಿಯಲ್ಲಿದ್ದಾಗ ಕರ್ನಾಟಕದ IPS ಬ್ಯಾಚ್‌ಮೇಟ್‌ಗೆ ಲೈಂಗಿಕ ಕಿರುಕುಳ: ಆಂಧ್ರದ ಯುವ IPS ಅರೆಸ್ಟ್

Telegram Group
Join Now

ಹೈದರಾಬಾದ್: ದೇಶದ ಉನ್ನತ ಪೊಲೀಸ್ ಅಧಿಕಾರಿಗಳನ್ನು ರೂಪಿಸುವ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಕರ್ನಾಟಕ ಮೂಲದ ಮಹಿಳಾ ಟ್ರೈನಿ ಐಪಿಎಸ್‌ ಅಧಿಕಾರಿಗೆ ಲೈಂಗಿಕ ಕಿರುಕುಳ, ಹಲ್ಲೆ, ಹಿಂಬಾಲಿಸುವಿಕೆ ಮತ್ತು ಬ್ಲ್ಯಾಕ್‌ಮೇಲ್‌ ಮಾಡಿದ ಆರೋಪದ ಮೇಲೆ ಆಂಧ್ರಪ್ರದೇಶ ಮೂಲದ ಯುವ ಟ್ರೈನಿ ಐಪಿಎಸ್‌ ಎಂ. ಉದಯ್ ಕೃಷ್ಣ ರೆಡ್ಡಿಯನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಈ ಹಿಂದೆ ಐಎಎಸ್‌ ಅಧಿಕಾರಿಗಳು ಪ್ರೇಮಪಾಶದಲ್ಲಿ: 

ಈ ಹಿಂದೆ, ಅಖಂಡ ಆಂಧ್ರಪ್ರದೇಶದ ಮಹಿಳಾ ಐಎಎಸ್‌ ಅಧಿಕಾರಿ ಮತ್ತು ಕರ್ನಾಟಕ ಐಎಎಸ್‌ ಅಧಿಕಾರಿ ತರಬೇತಿಯಲ್ಲಿದ್ದಾಗ ಪ್ರೇಮಪಾಶದಲ್ಲಿ ಸಿಲುಕಿ, ಕೊನೆಗೆ ಅದು ಯುವ ಅಧಿಕಾರಿಯ ಆತ್ಮಹತ್ಯೆಯಲ್ಲಿ ಕೊನೆಗೊಂಡಿತ್ತು.

ಯಾರಿದು ಯುವ ಐಪಿಎಸ್‌ ತರಬೇತುದಾರ?

ಉದಯ್ ಕೃಷ್ಣ ರೆಡ್ಡಿ 2025ನೇ ಬ್ಯಾಚ್‌ನ ಐಪಿಎಸ್‌ ತರಬೇತುದಾರ. ಈ ಹಿಂದೆ ಆಂಧ್ರಪ್ರದೇಶ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೆಬಲ್ ಆಗಿ ಸೇವೆ ಸಲ್ಲಿಸಿದ್ದ ಅವರು 2019ರಲ್ಲಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ನಂತರ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿ, 2024ರಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಪಿಎಸ್‌ಗೆ ಆಯ್ಕೆಯಾಗಿದ್ದರು.

ಕಾನ್‌ಸ್ಟೆಬಲ್ ಹುದ್ದೆಯಿಂದ ಐಪಿಎಸ್‌ವರೆಗೆ ಸಾಗಿದ ಅವರ ಸಾಧನೆಯ ಪಯಣ ದೇಶದ ಗಮನ ಸೆಳೆದಿತ್ತು. ಐಪಿಎಸ್‌ಗೆ ಆಯ್ಕೆಯಾದ ಸಂದರ್ಭದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಕೂಡ ಅವರನ್ನು ಅಭಿನಂದಿಸಿದ್ದರು. ಈಗ ಅದೇ ಯುವ ಅಧಿಕಾರಿ ಗಂಭೀರ ಆರೋಪಗಳಡಿ ಬಂಧನಕ್ಕೊಳಗಾಗಿರುವುದು ಪೊಲೀಸ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ದೂರುದಾರರು ಕರ್ನಾಟಕ ಮೂಲದ 30 ವರ್ಷದ ಮಹಿಳಾ ಐಪಿಎಸ್‌ ತರಬೇತುದಾರ್ತಿ ಹಾಗೂ ರೆಡ್ಡಿಯ ಬ್ಯಾಚ್‌ಮೇಟ್. ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ಸಂತ್ರಸ್ತೆಯ ಗುರುತನ್ನು ರಕ್ಷಿಸಬೇಕಾದ ಕಾನೂನುಬದ್ಧ ಹೊಣೆಗಾರಿಕೆಯ ಹಿನ್ನೆಲೆಯಲ್ಲಿ ಅವರ ಹೆಸರನ್ನು ಇಲ್ಲಿ ಬಹಿರಂಗಪಡಿಸಲಾಗಿಲ್ಲ.

ಯಾವಾಗ ಪ್ರಕರಣ ದಾಖಲಾಯಿತು?

ಜೂನ್ 23ರಿಂದ ಕಿರುಕುಳ ಆರಂಭವಾಯಿತು ಎಂದು ಮಹಿಳಾ ಅಧಿಕಾರಿ ಆರೋಪಿಸಿದ್ದಾರೆ. ಜುಲೈ 18ರಂದು ಅತ್ತಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜುಲೈ 28ರ ರಾತ್ರಿ ರೆಡ್ಡಿಯನ್ನು ವಶಕ್ಕೆ ಪಡೆದ ಪೊಲೀಸರು, ಜುಲೈ 29ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ನ್ಯಾಯಾಲಯವು ಆಗಸ್ಟ್ 11ರವರೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ, ಅವರನ್ನು ಚಂಚಲಗುಡ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿತು. ನಂತರ ಪ್ರಕರಣದ ವಿಚಾರಣೆಗಾಗಿ ಎರಡು ದಿನಗಳ ಪೊಲೀಸ್ ಕಸ್ಟಡಿಯನ್ನೂ ನೀಡಲಾಯಿತು.

ಎಲ್ಲಿ ಮತ್ತು ಹೇಗೆ ಕಿರುಕುಳ ನಡೆಯಿತು?

ಇಬ್ಬರೂ 2025ರ ಮಧ್ಯಭಾಗದಲ್ಲಿ Instagram ಸಾಮಾಜಿಕ ಜಾಲತಾಣದ ಮೂಲಕ ಪರಿಚಯಗೊಂಡಿದ್ದರು ಎನ್ನಲಾಗಿದೆ. ನಂತರ ಹೈದರಾಬಾದ್‌ನ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದರು.

ಜುಲೈ 9ರ ರಾತ್ರಿ ಬಲವಂತವಾಗಿ ತನ್ನನ್ನು ಕೊಠಡಿಗೆ ಎಳೆದೊಯ್ದು, ಕೂದಲು ಹಿಡಿದು ಎಳೆದು, ಕತ್ತು ಹಿಸುಕಲು ಯತ್ನಿಸಲಾಗಿದೆ ಎಂದು ಮಹಿಳಾ ಅಧಿಕಾರಿ ದೂರಿನಲ್ಲಿ ಆರೋಪಿಸಿದ್ದಾರೆ. ಕುತ್ತಿಗೆಗೆ ಚಾಕು ಹಿಡಿದು ಬೆದರಿಸಿ, ಕೊಠಡಿಯಿಂದ ಹೊರಹೋಗದಂತೆ ತಡೆಯಲಾಗಿತ್ತು ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜುಲೈ 10ರಂದು ಮತ್ತೆ ಹಲ್ಲೆ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಖಾಸಗಿ ವಿಡಿಯೊ ಮೂಲಕ ಬ್ಲ್ಯಾಕ್‌ಮೇಲ್‌ ಆರೋಪ

ದೂರಿನಲ್ಲಿರುವ ಅತ್ಯಂತ ಗಂಭೀರ ಆರೋಪವೆಂದರೆ, ಮಹಿಳಾ ಅಧಿಕಾರಿಯ ಒಪ್ಪಿಗೆ ಅಥವಾ ಅರಿವಿಲ್ಲದೆ ಅವರ ಖಾಸಗಿ ವಿಡಿಯೊವನ್ನು ರಹಸ್ಯವಾಗಿ ದಾಖಲಿಸಲಾಗಿದೆ ಎನ್ನುವುದು. ಆ ವಿಡಿಯೊವನ್ನು ಅವರ ಪತಿಗೆ ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದಲ್ಲದೆ, ಮಹಿಳಾ ಅಧಿಕಾರಿಯ ಮೊಬೈಲ್‌ ಅನ್ನು ಬಲವಂತವಾಗಿ ಪರಿಶೀಲಿಸುವುದು, ವೈಯಕ್ತಿಕ ಸಂದೇಶಗಳನ್ನು ನೋಡುವುದು, ಲೈಂಗಿಕವಾಗಿ ನಿಂದಿಸುವ ಸಂದೇಶಗಳನ್ನು ಕಳುಹಿಸುವುದು ಹಾಗೂ ಅವರು ಸಂಪರ್ಕ ನಿರ್ಬಂಧಿಸಿದ ಬಳಿಕ ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ತೆರೆಯಲಾಗಿದೆ ಎನ್ನಲಾಗಿದೆ. ಅಕಾಡೆಮಿಯ ಇತರ ತರಬೇತುದಾರರ ಬಳಿ ಸುಳ್ಳು ಮತ್ತು ಅವಹೇಳನಕಾರಿ ಮಾಹಿತಿ ಹರಡುವ ಮೂಲಕ ಅವರ ಗೌರವಕ್ಕೆ ಧಕ್ಕೆ ತರಲು ಯತ್ನಿಸಲಾಗಿದೆ ಎಂಬ ಆರೋಪವೂ ಎಫ್‌ಐಆರ್‌ನಲ್ಲಿದೆ.

ಎಲ್ಲ ಆಯಾಮಗಳಲ್ಲೂ ತನಿಖೆ

ಹುಬ್ಬಳ್ಳಿ ಮೂಲದ ಕನ್ನಡಿಗರಾದ ಹೈದರಾಬಾದ್ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ್ ಅವರ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ. ಮಹಿಳಾ ಅಧಿಕಾರಿಯ ಹೇಳಿಕೆ ಈಗಾಗಲೇ ದಾಖಲಾಗಿದ್ದು, ಅಕಾಡೆಮಿಯ ಸಿಬ್ಬಂದಿ, ಸಹ ತರಬೇತುದಾರರು ಮತ್ತು ಇತರ ಸಾಕ್ಷಿಗಳಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಈ ಪ್ರಕರಣದ ತನಿಖೆಯನ್ನು ಬಳಿಕ ಮಹಿಳಾ ಸುರಕ್ಷತಾ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಇದರ ನೇತೃತ್ವವನ್ನು ರಾಜೇಂದ್ರನಗರದ ಉಪ ಪೊಲೀಸ್ ಆಯುಕ್ತೆ (DCP) ಲಾವಣ್ಯ ನಾಯಕ್ ಜಾಧವ್ ವಹಿಸಿದ್ದು, ಇನ್ಸ್‌ಪೆಕ್ಟರ್ ಜ್ಯೋತ್ಸ್ನಾ ಅವರು ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮೊಬೈಲ್‌ ಫೋನ್‌, ವಾಟ್ಸ್‌ಆ್ಯಪ್ ಸಂಭಾಷಣೆ, ಖಾಸಗಿ ವಿಡಿಯೊ, ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳು, ಕರೆ ವಿವರಗಳು ಮತ್ತು ಇತರ ಡಿಜಿಟಲ್ ದಾಖಲೆಗಳನ್ನೂ ಪರಿಶೀಲಿಸಲಾಗುತ್ತಿದೆ.

ಪ್ರಕರಣದಲ್ಲಿ ಲೈಂಗಿಕ ದೌರ್ಜನ್ಯ, ಹಿಂಬಾಲಿಸುವಿಕೆ, ವಾಯರಿಸಂ, ಅಕ್ರಮ ಬಂಧನ, ಹಲ್ಲೆ, ಬೆದರಿಕೆ ಮತ್ತು ಕೊಲೆ ಯತ್ನಕ್ಕೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳು ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ಗಳನ್ನು ಅನ್ವಯಿಸಲಾಗಿದೆ.

ಉದಯ್ ಕೃಷ್ಣ ರೆಡ್ಡಿ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ. ಆರೋಪಗಳು ಆಧಾರರಹಿತವಾಗಿದ್ದು, ಕಾನೂನು ಪ್ರಕ್ರಿಯೆಯಲ್ಲಿ ಸಂಪೂರ್ಣ ವಿಶ್ವಾಸವಿದೆ ಎಂದು ಅವರು ಸಾಮಾಜಿಕ ಮಾಧ್ಯಮದ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಎಫ್‌ಐಆರ್‌ ನಲ್ಲಿರುವ ಎಲ್ಲ ಅಂಶಗಳು ಸದ್ಯಕ್ಕೆ ಆರೋಪಗಳಾಗಿವೆ. ತನಿಖೆ ಮತ್ತು ನ್ಯಾಯಾಲಯದ ವಿಚಾರಣೆಯ ನಂತರವೇ ಅವುಗಳ ಸತ್ಯಾಸತ್ಯತೆ ಅಂತಿಮವಾಗಿ ನಿರ್ಧಾರವಾಗಲಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments