Friday, August 28, 2026
HomeಇತರೆBFIL ಸಂಸ್ಥೆಯ ಸೇಫ್‌ ಲಾಕರ್‌ನಲ್ಲಿದ್ದ 5.50 ಲಕ್ಷ ಹಣ ದುರುಪಯೋಗ: ಇಬ್ಬರು ಸಿಬ್ಬಂದಿ ವಿರುದ್ದ ದೂರು

BFIL ಸಂಸ್ಥೆಯ ಸೇಫ್‌ ಲಾಕರ್‌ನಲ್ಲಿದ್ದ 5.50 ಲಕ್ಷ ಹಣ ದುರುಪಯೋಗ: ಇಬ್ಬರು ಸಿಬ್ಬಂದಿ ವಿರುದ್ದ ದೂರು

Telegram Group
Join Now

ಎನ್.ಆರ್.ಪುರ:  ಭಾರತ್ ಫೈನಾನ್ಸಿಯಲ್ ಇನ್‌ಕ್ಲೂಶನ್ ಲಿಮಿಟೆಡ್‌ (ಬಿಎಫ್‌ಐಎಲ್‌) ಸಂಸ್ಥೆಯ ಸೇಫ್‌ ಲಾಕರ್‌ನಲ್ಲಿದ್ದ ಚೆಕ್‌ಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ಬಾರದಂತೆ ತೆಗೆದುಕೊಂಡು ₹5.50 ಲಕ್ಷ ಹಣವನ್ನು ಬಿಡಿಸಿಕೊಂಡು ದುರುಪಯೋಗಪಡಿಸಿಕೊಂಡ ಆರೋಪದಡಿ ಇಬ್ಬರು ಸಿಬ್ಬಂದಿ ವಿರುದ್ಧ ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಸ್ಥೆಯ ನರಸಿಂಹರಾಜಪುರ ಘಟಕ ವ್ಯವಸ್ಥಾಪಕ ಸುನೀಲ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಸಂಸ್ಥೆಯಲ್ಲಿ ಬ್ರಾಂಚ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುರೇಶ್ ಎನ್.ಕೆ. ಹಾಗೂ ಬ್ರಾಂಚ್ ಕ್ರೆಡಿಟ್ ಮ್ಯಾನೇಜರ್ (ಕ್ಯಾಶಿಯರ್) ಆಗಿದ್ದ ಸಂಜಯ್ ಪ್ರಕರಣದ ಆರೋಪಿಗಳಾಗಿದ್ದಾರೆ.

ದೂರಿನ ಪ್ರಕಾರ, ಸಂಸ್ಥೆಯ ಸೇಫ್ ಲಾಕರ್‌ನಲ್ಲಿ ಇರಿಸಲಾಗಿದ್ದ 565986 ಮತ್ತು 565987 ಸಂಖ್ಯೆಯ ಎರಡು ಚೆಕ್‌ಗಳನ್ನು ಆರೋಪಿಗಳು ಮೇಲಾಧಿಕಾರಿಗಳ ಗಮನಕ್ಕೆ ಬಾರದಂತೆ ತೆಗೆದುಕೊಂಡಿದ್ದಾರೆ. ಬಳಿಕ ಆ ಪೈಕಿ 565986 ಸಂಖ್ಯೆಯ ಚೆಕ್ ಮೂಲಕ ಆ.17ರಂದು ನರಸಿಂಹರಾಜಪುರ ಎಸ್‌ಬಿಐ ಶಾಖೆಯಿಂದ ₹5.50 ಲಕ್ಷ ಹಣವನ್ನು ವಿತ್‌ಡ್ರಾ ಮಾಡಿಕೊಂಡು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪಿಗಳ ಕರ್ತವ್ಯದಲ್ಲಿನ ಹಣದ ದುರುಪಯೋಗದ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಇಬ್ಬರನ್ನೂ ಆ.17ರಂದು ಅಮಾನತುಗೊಳಿಸಲು ಆದೇಶಿಸಲಾಗಿತ್ತು. ಆದರೂ ಅದೇ ದಿನ ಇಬ್ಬರೂ ಸೇರಿ ಸಂಸ್ಥೆಯ ಸೇಫ್ ಲಾಕರ್‌ನಿಂದ ಚೆಕ್‌ಗಳನ್ನು ತೆಗೆದುಕೊಂಡು ಹಣ ಬಿಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸುರೇಶ್ ಅವರು ಸುಮಾರು ಏಳು ವರ್ಷಗಳಿಂದ ಹಾಗೂ ಸಂಜಯ್ ಸುಮಾರು ಒಂದು ವರ್ಷದಿಂದ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಸ್ಥೆಗೆ ಮೋಸ, ನಂಬಿಕೆ ದ್ರೋಹ ಹಾಗೂ ಹಣ ದುರುಪಯೋಗಪಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.

ಈ ಸಂಬಂಧ ನರಸಿಂಹರಾಜಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments