Saturday, August 22, 2026
Homeಇತರೆರಸ್ತೆಗಳ ದುಃಸ್ಥಿತಿ ವಿರುದ್ಧ ಬಿಜೆಪಿ ಯುವಮೋರ್ಚಾ ಪಾದಯಾತ್ರೆ: ಸರ್ಕಾರಕ್ಕೆ ಡಾ. ಸಿ.ಟಿ.ರವಿ ಎಚ್ಚರಿಕೆ

ರಸ್ತೆಗಳ ದುಃಸ್ಥಿತಿ ವಿರುದ್ಧ ಬಿಜೆಪಿ ಯುವಮೋರ್ಚಾ ಪಾದಯಾತ್ರೆ: ಸರ್ಕಾರಕ್ಕೆ ಡಾ. ಸಿ.ಟಿ.ರವಿ ಎಚ್ಚರಿಕೆ

Telegram Group
Join Now

ಚಿಕ್ಕಮಗಳೂರು: ಆಲ್ದೂರು ಮಂಡಲ ವ್ಯಾಪ್ತಿಯಲ್ಲಿ ತೀವ್ರವಾಗಿ ಹದಗೆಟ್ಟಿರುವ ರಸ್ತೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಬಿಜೆಪಿ ಯುವಮೋರ್ಚಾ ಆಲ್ದೂರು ಮಂಡಲದ ನೇತೃತ್ವದಲ್ಲಿ ನಡೆದ ಬೃಹತ್ ಪಾದಯಾತ್ರೆ ಬಳಿಕ ಅಜಾದ್ ಪಾರ್ಕ್‌ನಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ. ಟಿ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಹೋರಾಟವನ್ನು ಅಭಿನಂದಿಸಿದ ಅವರು, ಜನರ ಮನಸ್ಸಿನ ಭಾವನೆಗಳಿಗೆ ಕನ್ನಡಿ ಹಿಡಿದು ಆಳುವ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ನೀವು ಮಾಡಿದ್ದೀರಿ ಎಂದರು.

ಬಿಜೆಪಿ ಹೋರಾಟದ ಮೂಲಕ ಬೆಳೆದ ಪಕ್ಷವಾಗಿದ್ದು, ಜನರ ವಿಶ್ವಾಸವನ್ನೂ ಹೋರಾಟದ ಮೂಲಕವೇ ಗಳಿಸಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಕ್ಷದ ಶಾಸಕರ ನಡುವೆ ಅಭಿವೃದ್ಧಿಗಾಗಿ ಸ್ಪರ್ಧೆ ಇತ್ತು. ಚಿಕ್ಕಮಗಳೂರು, ಮೂಡಿಗೆರೆ, ಕಡೂರು, ತರೀಕೆರೆ, ಶೃಂಗೇರಿ ಕ್ಷೇತ್ರಗಳಿಗೆ ಹೆಚ್ಚಿನ ಅಭಿವೃದ್ಧಿ ಅನುದಾನ ತರುವ ವಿಚಾರದಲ್ಲಿ ಸ್ಪರ್ಧೆ ನಡೆಯುತ್ತಿತ್ತು. ಆದರೆ ಈಗಿನ ಪರಿಸ್ಥಿತಿಯಲ್ಲಿ ನೀನೆಷ್ಟು ಲೂಟಿ ಹೊಡೆದೆ, ನಾನೆಷ್ಟು ಲೂಟಿ ಹೊಡೆದೆ ಎಂಬ ರೀತಿಯಲ್ಲಿ ಲೂಟಿ ಹೊಡೆಯುವುದಕ್ಕೆ ಸ್ಪರ್ಧೆ ನಡೆಯುತ್ತಿದೆ ಎಂದು ಆರೋಪಿಸಿದರು.

ಆಲ್ದೂರು ಸೇರಿದಂತೆ ವಿವಿಧ ಭಾಗಗಳ ರಸ್ತೆ ದುಸ್ಥಿತಿಯನ್ನು ಪ್ರಸ್ತಾಪಿಸಿದ ರವಿ ಅವರು, ರಸ್ತೆಯಲ್ಲಿ ಗುಂಡಿಗಳಿರುವುದಲ್ಲ, ಗುಂಡಿಯೊಳಗೆ ರಸ್ತೆ ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವ್ಯಂಗ್ಯವಾಡಿದರು.

ಆದಿಶಕ್ತಿನಗರದಿಂದ ಮಳಲೂರು-ಗೆಂಡೆಹಳ್ಳಿ ರಸ್ತೆ ಸೇರಿದಂತೆ ಹಲವು ಮಾರ್ಗಗಳಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದೆ ಎಂದು ಅವರು ಹೇಳಿದರು. ಬಾಳೆಹೊನ್ನೂರು ರಸ್ತೆಯಲ್ಲೂ ದೊಡ್ಡ ಪ್ರಮಾಣದಲ್ಲಿ ಗುಂಡಿಗಳಿದ್ದು, ಮೂಡಿಗೆರೆ ಮತ್ತು ಶೃಂಗೇರಿ ಕ್ಷೇತ್ರಗಳಿಗೆ ಸೇರಿದ ರಸ್ತೆಯಲ್ಲಿ 3,700 ಗುಂಡಿಗಳಿವೆ ಎಂದು ಹೇಳಲಾಗುತ್ತಿದೆ. ನೀವು ನಿಜವಾಗಿಯೂ ಅನುದಾನ ಮಂಜೂರು ಮಾಡಿಸಿದ್ದರೆ ಕೆಲಸ ನೆಲಮಟ್ಟದಲ್ಲಿ ಏಕೆ ಆಗಿಲ್ಲ? ಅನುದಾನ ಮಂಜೂರಾಗಿ ಕೆಲಸ ನಡೆಯದಿರುವುದರ ಹಿಂದೆ ಕಳ್ಳ ಲೆಕ್ಕ, ಸುಳ್ಳು ಬಿಲ್‌ಗಳ ಮೂಲಕ ಹಣ ದುರುಪಯೋಗವಾಗುತ್ತಿದೆಯೇ ಎಂಬ ಅನುಮಾನ ವ್ಯಕ್ತಪಡಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಜನರು ಐದಕ್ಕೆ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರೂ, ಇದೀಗ ಅದೇ ಜನರ ವಿಶ್ವಾಸವನ್ನು ಸರ್ಕಾರ ಕಳೆದುಕೊಂಡಿದೆ. ಒಂದೊಂದು ಗುಂಡಿ ದಾಟುವಾಗಲೂ ಜನ ನಿಮಗೆ ಶಾಪ ಹಾಕುತ್ತಿದ್ದಾರೆ. ಯಾವ ಜನ ನಿಮ್ಮನ್ನು ಅಧಿಕಾರದ ಕುರ್ಚಿಯಲ್ಲಿ ಕೂರಿಸಿದ್ದಾರೋ, ಅದೇ ಜನ ನಿಮ್ಮನ್ನು ರಾಜಕೀಯವಾಗಿ ಆ ಗುಂಡಿಯೊಳಗೆ ತುಂಬುವ ದಿನ ದೂರವಿಲ್ಲ. ಅಧಿಕಾರ ಶಾಶ್ವತವಲ್ಲ. ಜನರು ಅಧಿಕಾರ ನೀಡುತ್ತಾರೆ, ಅದೇ ಜನ ಅಧಿಕಾರದಿಂದ ಕೆಳಗಿಳಿಸಬಹುದು ಎಂದರು.

ಚುನಾವಣೆಗಳು ಬಂದಾಗ ಮಾತ್ರ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳಿಗೆ ಹಣ ನೀಡಬೇಕೆಂಬುದು ನೆನಪಾಗುತ್ತದೆ. ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಬಡವರ ಮನೆಗಳಿಗೆ ಹಣ ತಲುಪಿಲ್ಲ. ನಿಮ್ಮ ಮನೆಯಲ್ಲಿ ಲಕ್ಷ್ಮಿಯನ್ನು ಇಟ್ಟುಕೊಂಡು ಪೂಜೆ ಮಾಡಿದಿರಿ, ಆದರೆ ಬಡವರ ಮನೆಗೆ ಲಕ್ಷ್ಮಿ ಬರಲಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ವಿದ್ಯುತ್ ಪರಿವರ್ತಕಕ್ಕೆ ಹಿಂದೆ ಸುಮಾರು 20 ಸಾವಿರ ನೀಡಬೇಕಾಗಿದ್ದರೆ ಈಗ 3 ಲಕ್ಷದವರೆಗೆ ನೀಡಬೇಕಾದ ಪರಿಸ್ಥಿತಿ ಇದೆ. ಅದೇ ರೀತಿ 100 ರೂಪಾಯಿ ಸ್ಟಾಂಪ್ ಪೇಪರ್ ಬದಲಿಗೆ 500 ನೀಡಬೇಕಾಗಿದೆ. ಜನನ ಮತ್ತು ಮರಣ ಪ್ರಮಾಣಪತ್ರಗಳಿಗೆ ಹಿಂದೆ 5 ರೂಪಾಯಿ ಇದ್ದ ಶುಲ್ಕ ಈಗ 50 ರೂಪಾಯಿ ಆಗಿದೆ ಎಂದು ಅವರು ಆರೋಪಿಸಿದರು.

ಸರ್ಕಾರ 67 ಸಾವಿರ ಬಡವರ ಪಿಂಚಣಿ ಹಣವನ್ನು ರದ್ದುಪಡಿಸಿದೆ. ಇದರಿಂದ ಅಂಗವಿಕಲರು, ವೃದ್ಧರು ಮತ್ತು ವಿಧವೆಯರು ಸಂಕಷ್ಟಕ್ಕೊಳಗಾಗಿದ್ದಾರೆ. ಅದೇ ರೀತಿ ಸಾವಿರಾರು ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ ಎಂದು ಹೇಳಿದ ಅವರು, ಸರ್ಕಾರ ವಿವಿಧ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಿರುವುದಾಗಿ ಹೇಳುವುದಾದರೆ ಅದರ ಪ್ರಯೋಜನ ನೆಲಮಟ್ಟದಲ್ಲಿ ಕಾಣಿಸಬೇಕಲ್ಲವೇ ಎಂದು ಪ್ರಶ್ನಿಸಿದರು.

ದಾಸರಹಳ್ಳಿ ಕೆರೆಯ ಕಾಮಗಾರಿಯನ್ನು ಉಲ್ಲೇಖಿಸಿದ ರವಿ ಅವರು, ತಮ್ಮ ಅವಧಿಯಲ್ಲಿ 30 ಕೋಟಿ ರೂಪಾಯಿ ಮಂಜೂರು ಮಾಡಿಸಿ 11 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ನೀರು ತುಂಬಿಸಲಾಗಿತ್ತು ಎಂದು ಹೇಳಿದರು.

ಆದರೆ ಈಗ ಚೆನ್ನಾಗಿದ್ದ ಕೆರೆಯನ್ನು ಬಗೆದು ಹಾಳು ಮಾಡಲಾಗಿದೆ. ಹಣ ದುರುಪಯೋಗಪಡಿಸಿಕೊಳ್ಳುವ ಉದ್ದೇಶದಿಂದಲೇ ಈ ರೀತಿ ಮಾಡಲಾಗುತ್ತಿದೆಯೇ ಎಂಬ ಅನುಮಾನವಿದೆ. ಕಳಸಾಪುರ ಕೆರೆಯನ್ನೇ ತುಂಬಿಸುವ ಯೋಗ್ಯತೆ ಇಲ್ಲದವರು ಎತ್ತಿನಹೊಳೆ ಯೋಜನೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ ಅವರು, ಎತ್ತಿನಹೊಳೆ ಯೋಜನೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದು, ತಮ್ಮ ಸರ್ಕಾರದ ಅವಧಿಯಲ್ಲಿ 10 ಸಾವಿರ ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗಿದೆ ಎಂದು ಹೇಳಿದರು.

ಈ ಪಾದಯಾತ್ರೆ ಕೇವಲ ರಾಜಕೀಯಕ್ಕಾಗಿ ಅಲ್ಲ, ಜನರ ಸಮಸ್ಯೆಗಳ ಪರವಾಗಿ ನಡೆಸುತ್ತಿರುವ ಹೋರಾಟ. ಇದು ಎಚ್ಚರಿಸುವುದಕ್ಕಾಗಿ ನಡೆದ ಹೋರಾಟ. ಇದು ಆರಂಭ ಮಾತ್ರ. ಈ ಹೋರಾಟ ಮೂಡಿಗೆರೆ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಬಾರದು. ಚಿಕ್ಕಮಗಳೂರು ಜಿಲ್ಲೆ ಮತ್ತು ರಾಜ್ಯದ ಉದ್ದಗಲಕ್ಕೂ ನಡೆಯಬೇಕು. ತುರ್ತು ಪರಿಸ್ಥಿತಿಗೂ ಹೆದರದ ಬಿಜೆಪಿ ಕಾರ್ಯಕರ್ತರು ನೋಟಿಸ್‌ಗಳಿಗೆ ಹೆದರುವುದಿಲ್ಲ ಎಂದರು

ಬಿಜೆಪಿ ಕಾರ್ಯಕರ್ತರಿಗೆ ಪ್ರಕರಣಗಳನ್ನು ದಾಖಲಿಸಿ ತೊಂದರೆ ನೀಡಿದರೆ ಮುಂದಿನ ದಿನಗಳಲ್ಲಿ ಅದಕ್ಕೆ ರಾಜಕೀಯವಾಗಿ ಉತ್ತರ ನೀಡಬೇಕಾಗುತ್ತದೆ. ಅಧಿಕಾರ ಇಂದು ಇದೆ, ನಾಳೆ ಇಲ್ಲ. ಅಧಿಕಾರ ಶಾಶ್ವತವಲ್ಲ. ಯಾವ ಜನ ನಿಮ್ಮನ್ನು ಅಧಿಕಾರದಲ್ಲಿ ಕೂರಿಸಿದ್ದಾರೋ, ಅದೇ ಜನ ನಿಮ್ಮನ್ನು ಅಧಿಕಾರದಿಂದ ಇಳಿಸುತ್ತಾರೆ. ಜೈಲಿಗೆ ಹಾಕುವ ಬೆದರಿಕೆಗೆ ಬಿಜೆಪಿ ಕಾರ್ಯಕರ್ತರು ಹೆದರಬಾರದು. ಯಾವುದೇ ಪರಿಸ್ಥಿತಿ ಬಂದರೂ ಜನಪರ ಹೋರಾಟ ಮುಂದುವರಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್. ದೇವರಾಜ್ ಶೆಟ್ಟಿ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲ್ಮುರುಡಪ್ಪ, ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್, ಮುಖಂಡರಾದ ದೀಪಕ್ ದೊಡ್ಡಯ್ಯ, ಕೋಟೆ ರಂಗನಾಥ್, ಬಿಜೆಪಿ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ವೆಂಕಟೇಶ್, ಆಲ್ದೂರು ಮಂಡಲ ಅಧ್ಯಕ್ಷ ರವಿ ಬಸರವಳ್ಳಿ, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ ಶಶಿ ಆಲ್ದೂರು, ಆಲ್ದೂರು ಯುವಮೋರ್ಚಾ ಮಂಡಲ ಅಧ್ಯಕ್ಷ ಸಿಂಧು ಕುಮಾರ್ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments