ಕೊಟ್ಟಿಗೆಹಾರ : ‘ಭಾಗ್ಯದ ಲಕ್ಷ್ಮೀ ಬಾರಮ್ಮ, ನಮ್ಮ ಮನೆಗೆ’ ಎಂದು ಮಹಾಲಕ್ಷ್ಮೀಯನ್ನು ಆರಾಧಿಸಿ ಅಷ್ಟೈಶ್ವರ್ಯಗಳ ವರ ಬೇಡುವ ವರಮಹಾಲಕ್ಷ್ಮೀ ವ್ರತವನ್ನು ಶುಕ್ರವಾರ ಬಣಕಲ್‌ನಲ್ಲಿ ಮಹಿಳೆಯರು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಮನೆ ಮನೆಗಳಲ್ಲಿ ಲಕ್ಷ್ಮೀ ಪೂಜೆ ನೆರವೇರಿಸಿ, ಕಳಸವನ್ನು ಸೀರೆ ಹಾಗೂ ವಿವಿಧ ಒಡವೆಗಳಿಂದ ಅಲಂಕರಿಸಲಾಗಿತ್ತು. ವಿವಿಧ ಬಗೆಯ ಹಣ್ಣು, ಸಿಹಿ ಹಾಗೂ ಭಕ್ಷ್ಯಗಳನ್ನು ನೈವೇದ್ಯವಾಗಿ ಸಮರ್ಪಿಸಲಾಯಿತು. ಮನೆಯಲ್ಲಿರುವ ಹಣ ಹಾಗೂ ಒಡವೆಗಳನ್ನು ದೇವಿಯ ಮುಂದಿರಿಸಿ ಕುಟುಂಬದಲ್ಲಿ ಐಶ್ವರ್ಯ, ಸುಖ-ಸಮೃದ್ಧಿ ನೆಲೆಸುವಂತೆ ಪ್ರಾರ್ಥಿಸಲಾಯಿತು.
ವ್ರತದ ಅಂಗವಾಗಿ ನೆರೆಹೊರೆಯವರು ಹಾಗೂ ಬಂಧು-ಬಳಗದವರನ್ನು ಆಹ್ವಾನಿಸಿ ಮುತ್ತೈದೆಯರಿಗೆ ಬಾಗಿನ ನೀಡಿ, ಅರಶಿನ-ಕುಂಕುಮ, ಹಣ್ಣು ಹಾಗೂ ತಾಂಬೂಲ ನೀಡಿ ಸತ್ಕರಿಸಲಾಯಿತು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ದೇವಿಯ ಆಶೀರ್ವಾದ ಕೋರಿದರು.
