ಮೂಡಿಗೆರೆ: ತಾಲೂಕಿನ ತ್ರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಗೋಮಾಳ ಜಾಗದ ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ನಡೆಸಿದ ಸುಮಾರು 15 ದಿನಗಳ ನಿರಂತರ ಹೋರಾಟಕ್ಕೆ ಕೊನೆಗೂ ಜಯ ದೊರೆತಿದೆ.
ಹೌದು ಸೋಮವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ತಹಸೀಲ್ದಾರ್ ಅಶ್ವಿನಿ ಅವರ ಸಮ್ಮುಖದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ, ಜಾಗವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಯಿತು.
ಸರ್ಕಾರಿ ಗೋಮಾಳ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ ತ್ರಿಪುರ ಗ್ರಾಮದ ಗ್ರಾಮಸ್ಥರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಒತ್ತುವರಿ ತೆರವುಗೊಳಿಸಿ ಸರ್ಕಾರಿ ಜಾಗವನ್ನು ಸಾರ್ವಜನಿಕರ ಬಳಕೆಗೆ ಒದಗಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ನಿರಂತರ ಹೋರಾಟ ನಡೆಸಿದ್ದರು.
ಗ್ರಾಮಸ್ಥರ ಹೋರಾಟಕ್ಕೆ ಸ್ಪಂದಿಸಿದ ತಹಸೀಲ್ದಾರ್ ಅಶ್ವಿನಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪೊಲೀಸ್ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ ಕೈಗೊಂಡರು. ಬಣಕಲ್ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ದಿಲೀಪ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಿದರು. ಒತ್ತುವರಿ ಮಾಡಿದ್ದ ಜಾಗದಲ್ಲಿನ ಕಾಫಿ ಗಿಡಗಳು ಹಾಗೂ ಬೇಲಿಯನ್ನು ತೆರವುಗೊಳಿಸಿ, ಸರ್ಕಾರಿ ಜಾಗವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಯಿತು.
ಸರ್ಕಾರಿ ಜಾಗದ ಒತ್ತುವರಿ ತೆರವುಗೊಳಿಸುವಂತೆ ಗ್ರಾಮಸ್ಥರು ಸತತವಾಗಿ ನಡೆಸಿದ ಹೋರಾಟಕ್ಕೆ ಅಧಿಕಾರಿಗಳು ಸ್ಪಂದಿಸಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ. ಸರ್ಕಾರಿ ಆಸ್ತಿಯನ್ನು ಸಂರಕ್ಷಿಸಿ, ಸಾರ್ವಜನಿಕರ ಹಿತದೃಷ್ಟಿಯಿಂದ ಬಳಕೆಗೆ ಒದಗಿಸುವಲ್ಲಿ ಕಂದಾಯ ಇಲಾಖೆ ಕೈಗೊಂಡ ಕ್ರಮಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
15 ದಿನಗಳ ಹೋರಾಟದ ಬಳಿಕ ಒತ್ತುವರಿ ತೆರವುಗೊಂಡಿರುವುದು ಗ್ರಾಮಸ್ಥರ ಒಗ್ಗಟ್ಟು ಮತ್ತು ನಿರಂತರ ಪ್ರಯತ್ನಕ್ಕೆ ದೊರೆತ ಫಲವಾಗಿದೆ. ಸರ್ಕಾರಿ ಜಾಗಗಳ ಒತ್ತುವರಿ ತಡೆಗಟ್ಟಲು ಸಂಬಂಧಪಟ್ಟ ಅಧಿಕಾರಿಗಳು ಮುಂದೆಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ. ತ್ರಿಪುರ ಗ್ರಾಮದ ಗ್ರಾಮಸ್ಥರಾದ ಚೆನ್ನಕೇಶವ ಗೌಡ, ಸಾಧನ್ ಗೌಡ, ಜಗದೀಶ್ ಗೌಡ, ಕೌಶಿಕ್, ಹರೀಶ್ ಗೌಡ, ಲೋಕೇಶ್, ನಾಗೇಶ್, ರಘು, ಕಲ್ಲೇಶ್, ನಂದೀಶ್, ಸುರೇಶ್ ಗೌಡ, ಸಾಗರ್, ಭರತ್ಲಾಲ್, ಅರುಣ್, ದಿಲೀಪ್, ಅಭಿಷೇಕ್, ಗಣೇಶ್, ಸುಮನ್, ಸುಭಾಷ್, ಪ್ರೇಮ್ಕುಮಾರ್, ತರುಣ್, ಮನೋಜ್, ಸಂತೋಷ್, ರಾಧಾಕೃಷ್ಣ, ಶಿವಾಂತ್, ಚೇತನ್, ಸುನಿಲ್ ಹಾಗೂ ಸುರೇಶ್ ಸೇರಿದಂತೆ ಗ್ರಾಮದ ಹಲವು ಯುವಕರು ತೆರವು ಕಾರ್ಯಾಚರಣೆಯಲ್ಲಿ ಭಾಗವಹಿಸಿ, ಒತ್ತುವರಿ ತೆರವುಗೊಳಿಸುವ ಕಾರ್ಯಕ್ಕೆ ಅಧಿಕಾರಿಗಳಿಗೆ ಸಹಕಾರ ನೀಡಿದರು. ಸರ್ಕಾರಿ ಗೋಮಾಳ ಜಾಗವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವ ಕಾರ್ಯದಲ್ಲಿ ಯುವಕರ ಸಹಭಾಗಿತ್ವ ಗಮನ ಸೆಳೆಯಿತು.
