ಶೃಂಗೇರಿ: ಅವಧೂತ ಶ್ರೀ ವಿನಯ್ ಗುರೂಜಿ ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಸುಪ್ರಸಿದ್ಧ ಮಳೆ ದೇವರೆಂದೇ ಖ್ಯಾತರಾದ ಋಷ್ಯಶೃಂಗ ಕಿಗ್ಗಾ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ತೀವ್ರ ನಿರಾಸೆ ಮೂಡಿಸಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ರೈತರು, ಸಾರ್ವಜನಿಕರು ಹಾಗೂ ಜಲಾಶಯ ಅವಲಂಬಿತ ಪ್ರದೇಶಗಳ ಜನರಲ್ಲಿ ಆತಂಕ ಮೂಡಿಸಿದೆ.
ಈ ಹಿನ್ನೆಲೆಯಲ್ಲಿ ಋಷ್ಯಶೃಂಗ ಕಿಗ್ಗಾ ಕ್ಷೇತ್ರಕ್ಕೆ ಭೇಟಿ ನೀಡಿದ ಅವಧೂತ ಶ್ರೀ ವಿನಯ್ ಗುರುಜಿಯವರು, ಶ್ರೀ ಮಲಹಾನಿಕೇಶ್ವರ ಸ್ವಾಮಿಗೆ ಭಕ್ತಿಶ್ರದ್ಧೆಯಿಂದ ಫಲ, ಪುಷ್ಪ, ವಸ್ತ್ರಾದಿ ದ್ರವ್ಯಗಳನ್ನು ಸಮರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ನಾಡಿನಲ್ಲಿ ಉತ್ತಮ ಮಳೆ-ಬೆಳೆ ಸಮೃದ್ಧಿಯಾಗಲಿ, ರೈತರ ಬದುಕಿನಲ್ಲಿ ನೆಮ್ಮದಿ, ಸುಖ-ಶಾಂತಿ ನೆಲೆಸಲಿ ಹಾಗೂ ಸರ್ವರ ಜೀವನದಲ್ಲಿ ಸಮೃದ್ಧಿ ತುಂಬಿರಲಿ ಎಂಬ ಸಂಕಲ್ಪದೊಂದಿಗೆ ಪ್ರಾರ್ಥಿಸಿದರು.
ಮುಂಗಾರು ಕೈಕೊಟ್ಟಿದ್ದರಿಂದ ಮಲೆನಾಡಿನ ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸಲು ಹಿಂಜರಿಯುತ್ತಿದ್ದಾರೆ. ಕಾಫಿ, ಅಡಿಕೆ, ಭತ್ತ ಸೇರಿದಂತೆ ವಿವಿಧ ಬೆಳೆಗಳ ಮೇಲೆ ಮಳೆಯ ಕೊರತೆಯ ಪರಿಣಾಮ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಜಲಮೂಲಗಳು ಬತ್ತುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆಯ ಭೀತಿಯೂ ಎದುರಾಗಿದೆ.
