ಶೃಂಗೇರಿ: ಪೋಷಕರೊಂದಿಗೆ ನವರಾತ್ರಿ ಪೂಜೆಗೆ ಶೃಂಗೇರಿಗೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತುಂಗಾ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ದುರಂತ ಘಟನೆ ಭಾನುವಾರ ನಡೆದಿದೆ.
ಕೋಲಾರ ಜಿಲ್ಲೆಯ ಮಾಲೂರು ಮೂಲದ ರಾಘವೇಂದ್ರ ಪೂಜಾರಿ (20) ಮೃತ ಯುವಕ. ಶೃಂಗೇರಿಯ ತುಂಗಾ ನದಿಯ ಪಾರ್ಕಿಂಗ್ ಲಾಟ್ ಸಮೀಪ ಈ ಘಟನೆ ಸಂಭವಿಸಿದೆ.
ಪೋಷಕರೊಂದಿಗೆ ಶೃಂಗೇರಿಗೆ ಬಂದಿದ್ದ ರಾಘವೇಂದ್ರ ಪೂಜೆಯ ಬಳಿಕ ತುಂಗಾ ನದಿಯ ಬಳಿ ತೆರಳಿದ್ದ ಎನ್ನಲಾಗಿದೆ. ನದಿಯಿಂದ ವಾಪಸ್ ಬಂದಿದ್ದ ಯುವಕ ಮತ್ತೆ ನೀರಿಗಿಳಿದಾಗ ಮುಳುಗಿದ್ದಾನೆ. ಈ ವೇಳೆ ನದಿಯಲ್ಲಿದ್ದ ಮಹಿಳೆಯೊಬ್ಬರು ಯುವಕ ಮುಳುಗುತ್ತಿರುವುದನ್ನು ಗಮನಿಸಿ ಕೂಗಿಕೊಂಡಿದ್ದಾರೆ. ಆದರೆ, ರಕ್ಷಿಸುವಷ್ಟರಲ್ಲಿ ಯುವಕ ನೀರಿನಲ್ಲಿ ಮುಳುಗಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಯುವಕನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ನದಿಯ ಆಳದಲ್ಲಿ ಮೃತದೇಹ ಪತ್ತೆಹಚ್ಚಲು ಮಲ್ಪೆಯ ಮುಳುಗು ತಜ್ಞ ಈಶ್ವರ್ ಅವರ ತಂಡವನ್ನೂ ಕರೆಸಲಾಗಿದೆ. ಅವರ ಸತತ ಕಾರ್ಯಾಚರಣೆ ಮೂಲಕ ಯುವಕನ ಶವ ಪತ್ತೆಯಾಗಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ತುಂಗಾ ನದಿಯ ಇದೇ ಪ್ರದೇಶದಲ್ಲಿ ಈ ಹಿಂದೆಯೂ ಹಲವರು ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಹೀಗಿದ್ದರೂ, ಸೂಕ್ತ ಸುರಕ್ಷತಾ ವ್ಯವಸ್ಥೆಗಳ ಕೊರತೆಯ ಬಗ್ಗೆ ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.
ಅಪಾಯಕಾರಿ ಸ್ಥಳಗಳಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸುವುದರ ಜೊತೆಗೆ ಅಗತ್ಯವಿರುವ ಕಡೆ ತಡೆಬೇಲಿ ನಿರ್ಮಿಸಿ, ಪ್ರವಾಸಿಗರು ನದಿಯ ಅಪಾಯಕಾರಿ ಭಾಗಗಳಿಗೆ ತೆರಳದಂತೆ ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಘಟನೆ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
