ಶೃಂಗೇರಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾರ್ಕಳ ಹಾಗೂ ಶೃಂಗೇರಿ ಭಾಗದ ಮೂಲ ನಿವಾಸಿಗಳಿಗೆ ತತ್ಕ್ಷಣ ವೈಜ್ಞಾನಿಕ ಪುನರ್ ವಸತಿ ಹಾಗೂ ಸೂಕ್ತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ “ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪುನರ್ ವಸತಿ ಹೋರಾಟ ಸಮಿತಿ” ವತಿಯಿಂದ ಶೃಂಗೇರಿ ತಹಶೀಲ್ದಾರರಿಗೆ ಇಂದು ಬೃಹತ್ ಮನವಿ ಸಲ್ಲಿಸಲಾಯಿತು. 2005ರಲ್ಲಿ ಜಾರಿಗೆ ತಂದ ಆದೇಶದ ಹಳೆಯ ಮೌಲ್ಯಗಳು ಇಂದಿನ ದಿನಕ್ಕೆ ಸಾಲುತ್ತಿಲ್ಲ ಎಂದು ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.

ಮೇಲ್ಕಂಡ ಯೋಜನೆಯ ವ್ಯಾಪ್ತಿಯ ಒಳಗಡೆ ವಾಸ ಮಾಡುವ ನಿವಾಸಿಗಳು ಮನವಿ ಮಾಡಿಕೊಳ್ಳುವುದೇನೆಂದರೆ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಕಾರ್ಕಳ ವ್ಯಾಪ್ತಿಯ ನಿವಾಸಿಗಳ ಪುನರ್ವಸತಿ ಮತ್ತು ಪರಿಹಾರದ ಸುತ್ತೋಲೆ ಸರ್ಕಾರಿ ಆದೇಶ ಸಂಖ್ಯೆ: ಆರ್ ಡಿ-26-ಆರ್ ಈ ಹೆಚ್-2003 ಬೆಂಗಳೂರು ದಿನಾಂಕ: 18/04/2005 ಆಗಿರುತ್ತದೆ. ಈ ಸರ್ಕಾರಿ ಆದೇಶವನ್ನು ಪುನರ್ ಪರಿಶೀಲಿಸಲು ಸಂತ್ರಸ್ತರು ಕೋರಿಕೊಂಡಿದ್ದಾರೆ.

20 ವರ್ಷ ಕಳೆದರೂ ಸಿಗದ ಪೂರ್ಣ ನ್ಯಾಯ:
ಸಂತ್ರಸ್ತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾ, “2005ರ ಸರ್ಕಾರಿ ಆದೇಶದಲ್ಲಿ 2008ರ ಒಳಗಾಗಿ ಎಲ್ಲಾ ಕುಟುಂಬಗಳನ್ನು ಪುನರ್ ವಸತಿಗೊಳಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ 2025ನೇ ವರ್ಷ ಕಳೆದರೂ ಈ ವರೆಗೂ ಪುನರ್ವಸತಿಗೊಳಿಸುವ ಕಾರ್ಯ ಪೂರ್ಣಗೊಂಡಿಲ್ಲ. ಇನ್ನು 2026ರಲ್ಲಿ ಪುನರ್ ವಸತಿಗಾಗಿ ಹಣ (ಜಮೀನು, ಮನೆಗಳಿಗೆ ಪುನರ್ವಸತಿ ಮೌಲ್ಯವನ್ನು) ಕೊಡುವಾಗ 20 ವರ್ಷಗಳ ಹಿಂದಿನ (2005 ರ) ಎಸ್ಆರ್ ದರದಂತೆಯೇ ಹಣವನ್ನು ನೀಡುತ್ತಿದ್ದಾರೆ. ಇದು ತೀವ್ರ ಅನ್ಯಾಯ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಣದುಬ್ಬರದಿಂದ ಜಮೀನು, ಮನೆ ಸೇರಿದಂತೆ ಸರಕು-ಸೇವೆಗಳ ಬೆಲೆಗಳು ಗಗನಕ್ಕೇರಿದ್ದು, ಭೂಮಿಯ ಬೆಲೆಯು ನಾಲ್ಕೈದು ಪಟ್ಟು ಹೆಚ್ಚಾಗಿದೆ. ಆದರೆ ಹಳೆಯ ಮೌಲ್ಯದಲ್ಲೇ ನೀಡುತ್ತಿರುವ ಪುನರ್ ವಸತಿ ಹಣದಿಂದ ಬೇರೆಡೆ ಜಮೀನು, ಮನೆಗಳನ್ನು ಕೊಳ್ಳಲು ಸಾಧ್ಯವಾಗದೆ ಅನೇಕ ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿ ಬಂದೊದಗಿದೆ.

ಸಮಿತಿಯ ಪ್ರಮುಖ ಬೇಡಿಕೆಗಳು:
₹50 ಲಕ್ಷ ಕನಿಷ್ಠ ಪರಿಹಾರ: ಪುನರ್ ವಸತಿ ಹೊಂದುವ ಪ್ರತಿ ಕುಟುಂಬಕ್ಕೆ ಕನಿಷ್ಠ ₹50 ಲಕ್ಷ ಮೂಲ ಪರಿಹಾರವನ್ನು ಒಂದೇ ಇಡಿಗಂಟಿನಲ್ಲಿ ನೀಡುವ ಪ್ಯಾಕೇಜ್ ನೀಡಬೇಕು.
ಸದ್ಯದ ದರದಲ್ಲಿ ಮೌಲ್ಯಮಾಪನ: 2005ರ ಸರ್ಕಾರಿ ಆದೇಶದಂತೆ ಕಿರು ಅರಣ್ಯ ಮತ್ತು ರಾಜ್ಯ ಅರಣ್ಯ ಪ್ರದೇಶದ ಸಾಗುವಳಿದಾರರಿಗೆ ಎಲ್ಲಾ ಜಮೀನು, ವಾಸದ ಮನೆ ಹಾಗೂ ಬೆಳೆಗಳಿಗೆ ಈಗಿನ (2026 ರ) ಮಾರುಕಟ್ಟೆ ದರದಲ್ಲಿ ಮೌಲ್ಯಮಾಪನ ಮಾಡಿ ಪರಿಹಾರ ನೀಡಬೇಕು.
ಸಣ್ಣಪುಟ್ಟ ಪರಿಹಾರಗಳ ಪರಿಷ್ಕರಣೆ: ಮನೆ ನಿರ್ಮಾಣಕ್ಕೆ ಕನಿಷ್ಠ ₹5 ಲಕ್ಷ, ಸಾಗಾಣಿಕೆಗೆ ₹50,000, ಹಾಗೂ ಸಂತ್ರಸ್ತ ರೈತರಿಗೆ ಉದ್ಯೋಗ ನಷ್ಟ ಪರಿಹಾರವಾಗಿ ಕನಿಷ್ಠ ₹2 ಲಕ್ಷ ನೀಡಬೇಕು.
ಭೂ ರಹಿತರಿಗೆ ಭೂಮಿ: ಭೂ ರಹಿತರಿಗೆ ಮತ್ತು ವಸತಿ ರಹಿತರಿಗೆ ಸರ್ಕಾರಿ ಆದೇಶದಂತೆ 100 Sqm ನಿವೇಶನ ಮತ್ತು 2 ಎಕರೆ ಭೂಮಿಯನ್ನೇ ನೀಡಬೇಕು.
ಪರಿಶಿಷ್ಟ ಜಾತಿ / ಪಂಗಡದವರಿಗೆ ಆದ್ಯತೆ: ಎಸ್ಸಿ, ಎಸ್ಟಿ ಕುಟುಂಬಗಳಿಗೆ ಭೂ ಒಡೆತನ ಯೋಜನೆಯಡಿ ಭೂಮಿಯನ್ನು ನೀಡಬೇಕು.ಸರ್ಕಾರಿ ಉದ್ಯೋಗ ಮತ್ತು ಮೀಸಲಾತಿ: ಪುನರ್ ವಸತಿ ಹೊಂದುವ ಎಲ್ಲಾ ಕುಟುಂಬಗಳು ನಿರಾಶ್ರಿತರು ಎಂಬ ದೃಢೀಕರಣ ಪತ್ರದೊಂದಿಗೆ ಪ್ರತಿ ಕುಟುಂಬಕ್ಕೂ ಒಂದು ಸರ್ಕಾರಿ ಹುದ್ದೆ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕು.ಪಹಣಿ ಗೊಂದಲಗಳ ನಿವಾರಣೆ: ಜಮೀನು ಅರಣ್ಯ ಇಲಾಖೆ ಪಹಣಿಯಲ್ಲಿ ಸರಿಯಾಗಿ ದಾಖಲಾಗದ ಪ್ರಕರಣಗಳನ್ನು ಸರಳೀಕರಿಸಿ ಸೂಕ್ತ ಪರಿಹಾರ ಒದಗಿಸಬೇಕು.
ಪ್ರಸ್ತುತ ಮಾರುಕಟ್ಟೆ ದರಕ್ಕಿಂತ 1:4 ಪ್ರಮಾಣದಲ್ಲಿ ಜಮೀನು ಮತ್ತು ವಾಸದ ಮನೆಗಳಿಗೆ ಹೆಚ್ಚುವರಿ ಮೌಲ್ಯದ ಪರಿಹಾರ ನೀಡಬೇಕೆಂದು ಸಮಿತಿ ಆಗ್ರಹಿಸಿದೆ. ಶೃಂಗೇರಿ ತಾಲೂಕಿನ ಕೆರೆಕಟ್ಟೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮತ್ತು ಸಂಸದರು ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅತೀ ಶೀಘ್ರದಲ್ಲಿ ಜನ ಸಂಪರ್ಕ ಸಭೆ ನಡೆಸಿ ಈ ಗೊಂದಲಗಳನ್ನು ಬಗೆಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ನೂರಾರು ಸಂತ್ರಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು.
