ಬೈಲಹೊಂಗಲ, ಬೆಳಗಾವಿ | ಜೂನ್ 9, 2026: ಬೈಲಹೊಂಗಲ ಪಟ್ಟಣದಲ್ಲಿ ಭಾರೀ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡ ಹಿನ್ನೆಲೆಯಲ್ಲಿ ಯುವ ಯೂಟ್ಯೂಬರ್ ಒಬ್ಬರು ರಸ್ತೆ ಮೇಲೆಯೇ ಮಳೆ ನೀರಿನಲ್ಲಿ ಕುಳಿತು ಧರಣಿ ನಡೆಸಿದ ಘಟನೆ ಮಂಗಳವಾರ ನಡೆದಿದೆ (Bailhongal youtuber protest)
ಬೈಲಹೊಂಗಲ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಕುಲಕರ್ಣಿ ಗಲ್ಲಿ, ಪಾಟೀಲ ಗಲ್ಲಿ ಹಾಗೂ ಕೋಲಕಾರ ಗಲ್ಲಿ ಪ್ರದೇಶಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಸಾರ್ವಜನಿಕರು ಸಂಕಷ್ಟ ಅನುಭವಿಸಿದರು. ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ಚರಂಡಿ ಹಾಗೂ ರಸ್ತೆ ಸಮಸ್ಯೆ ಇರುವುದಾಗಿ ಸ್ಥಳೀಯರು ಆರೋಪಿಸಿದ್ದು, ಮಳೆಗಾಲ ಆರಂಭಕ್ಕೂ ಮುನ್ನ ಸಮಸ್ಯೆ ಪರಿಹರಿಸುವಂತೆ ನಗರಸಭೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೂರು ಗಂಟೆ ಕಾಲ ರಸ್ತೆ ಮೇಲೆಯೇ ಕುಳಿತು ಆಕ್ರೋಶ:
ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸ್ಥಳೀಯ ಯುವ ಯೂಟ್ಯೂಬರ್ ಈಶ್ವರ್ ಶಿಲ್ಲೇದಾರ ಅವರು ಮಳೆಯಿಂದ ರಸ್ತೆಯಲ್ಲಿ ಹರಿಯುತ್ತಿದ್ದ ನೀರಿನ ಮಧ್ಯೆಯೇ ಕುಳಿತು ಪ್ರತಿಭಟನೆ ಆರಂಭಿಸಿದರು. ಸುಮಾರು ಮೂರು ಗಂಟೆಗಳ ಕಾಲ ರಸ್ತೆ ಮೇಲೆಯೇ ಕುಳಿತು ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ಸುರಿದ ಭಾರೀ ಮಳೆಯಿಂದಾಗಿ ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ಜನರು ತಮ್ಮ ಮನೆಗಳಲ್ಲಿ ನೀರು ತೆರವುಗೊಳಿಸಲು ಪರದಾಡುವಂತಾಯಿತು. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನವೇ ಈ ಸಮಸ್ಯೆಗೆ ಪ್ರಮುಖ ಕಾರಣ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸ್ಥಳಕ್ಕೆ ನಗರಸಭೆ ಪೌರಾಯುಕ್ತೆ ಭೇಟಿ:
ವಿಷಯ ತಿಳಿದ ತಕ್ಷಣ ನಗರಸಭೆ ಪೌರಾಯುಕ್ತ ಭಾಗ್ಯಶ್ರೀ ಹುಗ್ಗಿ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ವಿಜಯ ಬೋಳನ್ನವರ ಅವರುಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಮಳೆ ನೀರು ಸರಾಗವಾಗಿ ಹರಿದು ಹೋಗಲು ತುರ್ತು ಕ್ರಮ ಕೈಗೊಳ್ಳುವುದಾಗಿ ಹಾಗೂ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.
ಅಧಿಕಾರಿಗಳ ಭರವಸೆಯ ನಂತರ ಯುವಕ ಈಶ್ವರ್ ಶಿಲ್ಲೇದಾರ ತಮ್ಮ ಧರಣಿಯನ್ನು ಹಿಂಪಡೆದರು. ಬಳಿಕ ಮಾತನಾಡಿದ ಅವರು, “ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ನಮ್ಮ ಸಮಸ್ಯೆಗೆ ಸ್ಪಂದಿಸಲಿಲ್ಲ. ಜನರ ಸಮಸ್ಯೆಯನ್ನು ಗಮನಕ್ಕೆ ತರಲು ಅನಿವಾರ್ಯವಾಗಿ ಈ ರೀತಿಯ ಪ್ರತಿಭಟನೆ ನಡೆಸಬೇಕಾಯಿತು. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಮರುಕಳಿಸದಂತೆ ಶಾಶ್ವತ ಪರಿಹಾರ ಒದಗಿಸಬೇಕು” ಎಂದು ಒತ್ತಾಯಿಸಿದರು.
ತಕ್ಷಣ ಚರಂಡಿ ಮತ್ತು ರಸ್ತೆ ದುರಸ್ತಿ ಕಾರ್ಯ ಕೈಗೊಂಡು ಮಳೆ ನೀರು ಮನೆಗಳಿಗೆ ನುಗ್ಗದಂತೆ ನಗರಸಭೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಗಳು ಯೂಟ್ಯೂಬರ್ ಶಿಲ್ಲೇದಾರ ಅವರ ಮನವಿಗೆ ದನಿಗೂಡಿಸಿದ್ದಾರೆ.
