ಕಾಫಿನಾಡು ಚಿಕ್ಕಮಗಳೂರಿನ ಪ್ರಸಿದ್ಧ ಸಂತ ಜೋಸೆಫರ ಪ್ರಧಾನಾಲಯದಲ್ಲಿ ಸಮುದಾಯ ಭವನ ನಿರ್ಮಾಣದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ‘ಮೆಗಾ ಲಕ್ಕಿ ಡ್ರಾ’ ಆಯೋಜಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಜಿಲ್ಲಾಡಳಿತದ ಯಾವುದೇ ಅಧಿಕೃತ ಅನುಮತಿ ಪಡೆಯದೆ ನಿಯಮಬಾಹಿರವಾಗಿ ₹2.5 ಕೋಟಿಗೂ ಅಧಿಕ ಮೊತ್ತ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಬೆನೆಡಿಕ್ಟ್ ಜೇಮ್ಸ್ ಅವರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಗಂಭೀರ ದೂರು ಸಲ್ಲಿಸಿದ್ದಾರೆ.

ಚರ್ಚ್‌ನ ಧರ್ಮಗುರು ಶಾಂತರಾಜು ಆರ್. ಅವರ ನೇತೃತ್ವದಲ್ಲಿ ಈ ಲಕ್ಕಿ ಡ್ರಾ ಸಿದ್ಧತೆಗಳು ನಡೆದಿದ್ದು, ತಲಾ ₹1,000 ಮುಖಬೆಲೆಯ ಟಿಕೆಟ್‌ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಾಗಿದೆ. ಸೆಪ್ಟೆಂಬರ್ 8ರ ಮರಿಯಾ ಜಯಂತಿಯ ಶುಭ ಸಂದರ್ಭದಲ್ಲಿ ಜುಬಿಲಿ ಹಾಲ್‌ನಲ್ಲಿ ಈ ಡ್ರಾ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅದೃಷ್ಟಶಾಲಿ ವಿಜೇತರಿಗೆ ಆಲ್ಟೊ ಕಾರು, ಎಲೆಕ್ಟ್ರಿಕ್ ವೆಸ್ಪಾ ಸ್ಕೂಟರ್, ಮೋಟಾರ್ ಬೈಕ್, ವಾಷಿಂಗ್ ಮೆಷಿನ್ ಸೇರಿದಂತೆ ಹತ್ತಾರು ದುಬಾರಿ ಬಹುಮಾನಗಳ ಆಮಿಷವೊಡ್ಡಿ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿತ್ತು.
ಆದರೆ, ಈ ಲಕ್ಕಿ ಡ್ರಾ ಆಯೋಜನೆಗೆ ಜಿಲ್ಲಾಡಳಿತದಿಂದ ಯಾವುದೇ ಅನುಮತಿ ಪಡೆದಿಲ್ಲ ಎಂಬುದು ಮಾಹಿತಿ ಹಕ್ಕು ಕಾಯ್ದೆಯಡಿ (RTI) ಬಹಿರಂಗಗೊಂಡಿದೆ.
ಕರ್ನಾಟಕ ಲಾಟರಿ ನಿಯಂತ್ರಣ ಕಾಯ್ದೆಯ ಪ್ರಕಾರ ರಾಜ್ಯದಲ್ಲಿ ಯಾವುದೇ ಖಾಸಗಿ ಲಾಟರಿ, ಬಂಪರ್ ಡ್ರಾ ಅಥವಾ ರಾಫೆಲ್‌ಗಳ ಮೂಲಕ ಸಾರ್ವಜನಿಕರಿಂದ ಹಣ ವಸೂಲಿ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.
ಸಮುದಾಯ ಭವನದ ನೆಪವಿದ್ದರೂ ಕಾನೂನಿನ ಚೌಕಟ್ಟನ್ನು ಮೀರಿ ನಡೆಯುತ್ತಿರುವ ಈ ಡ್ರಾ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಹಾಗೂ ಮುದ್ರಿತ ಟಿಕೆಟ್‌ಗಳು, ಸಂಗ್ರಹವಾದ ಕೋಟ್ಯಂತರ ರೂಪಾಯಿ ಮತ್ತು ಬ್ಯಾಂಕ್ ವಹಿವಾಟಿನ ಕುರಿತು ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರುದಾರರು ಒತ್ತಾಯಿಸಿದ್ದಾರೆ.
