ಹಾಸನ: ಹಾಡುಹಗಲೇ ನಡೆದ ಸುಮಾರು ₹70 ಲಕ್ಷ ಮೌಲ್ಯದ ಕಳ್ಳತನ ಪ್ರಕರಣವನ್ನು ಹಾಸನ ಗ್ರಾಮಾಂತರ ಪೊಲೀಸರು ಕೇವಲ ಒಂದೇ ದಿನದಲ್ಲಿ ಭೇದಿಸಿ, ಪ್ರಕರಣದ ಪ್ರಮುಖ ಆರೋಪಿಗಳಾದ ಸೊಸೆ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ. ಕಳುವಾಗಿದ್ದ ಚಿನ್ನಾಭರಣ ಮತ್ತು ನಗದನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಘಟನೆ ಹೇಗೆ ನಡೆಯಿತು?
ಹಾಸನ ತಾಲೂಕಿನ ದೊಡ್ಡಹೊನ್ನೇನಹಳ್ಳಿ ಗ್ರಾಮದ ನಿವಾಸಿ ಕೇಶವೇಗೌಡ ಅವರ ಮನೆಯಲ್ಲಿ ಶನಿವಾರ ಈ ಘಟನೆ ನಡೆದಿದೆ. ಶನಿವಾರ ಬೆಳಿಗ್ಗೆ ಕೇಶವೇಗೌಡ, ಅವರ ಪತ್ನಿ ಜಯಲಕ್ಷ್ಮೀ ಹಾಗೂ ಪುತ್ರ ವೇಣುಗೋಪಾಲ್ ಜಮೀನಿನ ಕೆಲಸಕ್ಕೆ ತೆರಳಿದ್ದರು. ಮನೆಯಲ್ಲಿದ್ದ ಸೊಸೆ ಅಮೃತಾ, ಮಗನನ್ನು ಶಾಲಾ ಬಸ್‌ಗೆ ಹತ್ತಿಸಿ ಮನೆಗೆ ಹಿಂದಿರುಗಿದ್ದಳು. ಕುಟುಂಬದವರು ಮನೆಯಲ್ಲಿ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಅಮೃತಾ, ತನ್ನ ಪ್ರಿಯಕರ ಪರಮೇಶ್ (ಅಲಿಯಾಸ್ ಚೇತನ್) ಅವರಿಗೆ ಕರೆ ಮಾಡಿ ಮನೆಗೆ ಬರಲು ತಿಳಿಸಿದ್ದಾಳೆ.ಪರಮೇಶ್ ಮನೆಗೆ ಬಂದ ಬಳಿಕ, ಅಮೃತಾ ಬೀರುವಿನಲ್ಲಿದ್ದ ಸುಮಾರು 441.5 ಗ್ರಾಂ ಚಿನ್ನಾಭರಣ (ಅಂದಾಜು ₹56.16 ಲಕ್ಷ ಮೌಲ್ಯ) ಹಾಗೂ ₹13.40 ಲಕ್ಷ ನಗದು ಸೇರಿ ಒಟ್ಟು ಸುಮಾರು ₹69.56 ಲಕ್ಷ ಮೌಲ್ಯದ ಆಸ್ತಿಯನ್ನು ತೆಗೆದು ಪ್ರಿಯಕರನಿಗೆ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.ಕಳುವಾದ ಹಣ ಮತ್ತು ಚಿನ್ನವನ್ನು ಪಡೆದುಕೊಂಡ ಪರಮೇಶ್ ಬೈಕ್‌ನಲ್ಲಿ ಸ್ಥಳದಿಂದ ತೆರಳಿದ್ದಾನೆ.
ಕಳ್ಳತನ ನಡೆದಿರುವ ಅನುಮಾನ ಬಾರದಂತೆ ಅಮೃತಾ ಮನೆಯ ಮುಂಭಾಗಿಲನ್ನು ಬೀಗ ಹಾಕದೇ, ಕೊಟ್ಟಿಗೆಗೆ ಮಾತ್ರ ಬೀಗ ಹಾಕಿ ಜಮೀನಿಗೆ ತೆರಳಿದ್ದಳು. ಸಂಜೆ ಜಮೀನಿನ ಕೆಲಸ ಮುಗಿಸಿ ಮನೆಗೆ ಬಂದ ಕುಟುಂಬಸ್ಥರು ಬೀರು ತೆರೆದಿರುವುದು ಹಾಗೂ ಚಿನ್ನ-ಹಣ ಕಾಣೆಯಾಗಿರುವುದನ್ನು ನೋಡಿ ಬೆಚ್ಚಿಬಿದ್ದರು. ಈ ವೇಳೆ ಅಮೃತಾ ಕೂಡ “ಅಯ್ಯೋ ಕಳ್ಳತನವಾಯ್ತು!” ಎಂದು ಅಳುತ್ತಾ ನಾಟಕವಾಡಿದ್ದಾಳೆ ಎನ್ನಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ತಕ್ಷಣ ತನಿಖೆ ಆರಂಭಿಸಿದರು. ವಿಚಾರಣೆ ವೇಳೆ ಅಮೃತಾಳ ವರ್ತನೆ ಹಾಗೂ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆ ನಡೆಸಿದಾಗ, ಕಳ್ಳತನದ ಸಂಪೂರ್ಣ ಸಂಚು ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ, ಅಮೃತಾ ಹಾಗೂ ಪರಮೇಶ್ ಹಲವು ವರ್ಷಗಳಿಂದ ಪರಿಚಿತರಾಗಿದ್ದು, ಇಬ್ಬರೂ ಸೇರಿ ಪೂರ್ವಯೋಜಿತವಾಗಿ ಈ ಕಳ್ಳತನ ನಡೆಸಿದ್ದರು.
ಪ್ರಕರಣ ನಡೆದ ಒಂದೇ ದಿನದಲ್ಲಿ ಆರೋಪಿಗಳಾದ ಅಮೃತಾ ಮತ್ತು ಪರಮೇಶ್ ಅವರನ್ನು ಬಂಧಿಸಿರುವ ಪೊಲೀಸರು, ಕಳುವಾಗಿದ್ದ 441.5 ಗ್ರಾಂ ಚಿನ್ನಾಭರಣ ಹಾಗೂ ₹13.40 ಲಕ್ಷ ನಗದನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದಾರೆ.
ಹಾಸನ ಗ್ರಾಮಾಂತರ ಪೊಲೀಸ್ ತಂಡದ ತ್ವರಿತ ಮತ್ತು ಪರಿಣಾಮಕಾರಿ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
