Wednesday, July 29, 2026
Homeಜಿಲ್ಲಾಸುದ್ದಿತರಕಾರಿ ಅಂಗಡಿ ತೆರವಿಗೆ ಸ್ಥಳೀಯರ ವಿರೋಧ: ಬಂದ ದಾರಿಗೆ ಸುಂಕವಿಲ್ಲದಂತೆ ಅಧಿಕಾರಿಗಳು ವಾಪಸ್!

ತರಕಾರಿ ಅಂಗಡಿ ತೆರವಿಗೆ ಸ್ಥಳೀಯರ ವಿರೋಧ: ಬಂದ ದಾರಿಗೆ ಸುಂಕವಿಲ್ಲದಂತೆ ಅಧಿಕಾರಿಗಳು ವಾಪಸ್!

Telegram Group
Join Now

ಮೂಡಿಗೆರೆ: ಸ್ಥಳೀಯರ ವಿರೋಧಕ್ಕೆ ತರಕಾರಿ ಅಂಗಡಿ ತೆರವಿಗೆ ಆಗಮಿಸಿದ ಅಧಿಕಾರಿಗಳು ವಾಪಸ್ಸಾದ ಘಟನೆ ಪಟ್ಟಣದ ಹಳೆ ಮೂಡಿಗೆರೆಯಲ್ಲಿ ನಡೆದಿದೆ.

ಹೌದು ಕಡೂರು-ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ 173 ಬದಿಯ ವಿಲಿಯಂ ಫೆರ್ನಾಂಡಿಸ್ ಎಂಬುವವರಿಗೆ ಸೇರಿದ 5 ಗುಂಟೆ ಹಿಡುವಳಿ ಜಾಗವನ್ನು ಬಾಡಿಗೆಗೆ ಪಡೆದು ಕಳೆದ 10 ವರ್ಷದಿಂದ ಯೂಸೂಫ್ ಎಂಬುವರು ತರಕಾರಿ ಮತ್ತು ಹಣ್ಣು ಹಂಪಲು ಅಂಗಡಿ ನಡೆಸುತ್ತಿದ್ದರು.

ಅಂಗಡಿಯನ್ನು ತೆರವುಗೊಳಿಸಲು ಸೋಮವಾರ ತಾಲ್ಲೂಕು ಪಂಚಾಯಿತಿ ಅಧಿಕಾರಿ ದಯಾವತಿ, ಹಳೆಮೂಡಿಗೆರೆ ಗ್ರಾಪಂ ಪಿಡಿಒ ಪಿ.ಎನ್.ವೀಣಾ ಅವರು ಸ್ಥಳಕ್ಕೆ ತೆರಳಿದಾಗ ಸಾರ್ವಜನಿಕರು ಜಮಾಯಿಸಿ ತರಕಾರಿ ಅಂಗಡಿ ತೆರವುಗೊಳಿಸಲು ಅವಕಾಶ ನೀಡದ ಕಾರಣ ಅಧಿಕಾರಿಗಳು ಬರಿಗೈಲಿ ಹಿಂದಿರುಗಬೇಕಾಯಿತು.

ತರಕಾರಿ ಅಂಗಡಿಗೆ ವಿಲಿಯಂ ಫೆರ್ನಾಂಡಿಸ್ ಅವರು ತಮ್ಮ ಸ್ವಂತ 5 ಗುಂಟೆ ಜಾಗವನ್ನು ನೀಡಿದ್ದಾರೆ. ಅವರ ಸಹೋದರಿ ಪ್ರೆಸಿಲ್ಲಾ ಫರ್ನಾಂಡಿಸ್ ಅವರು ಸಹೋದರ ವಿಲಿಯಂ ಫೆರ್ನಾಂಡಿಸ್ ಅವರೊಂದಿಗೆ ಕಳೆದ 10 ವರ್ಷದಿಂದ ವಾಗ್ವಾದಕ್ಕಿಳಿದು ತರಕಾರಿ ಅಂಗಡಿಯಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆಯಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸ್ಥಳೀಯ ಗ್ರಾಪಂ ಹಾಗೂ ಪೊಲೀಸರಿಗೂ ದೂರು ನೀಡಿದ್ದಾರೆ.

ತರಕಾರಿ ಅಂಗಡಿಯನ್ನು ತೆರೆವುಗೊಳಿಸಲು ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ತಾಪಂ ಅಧಿಕಾರಿಗಳು ಮತ್ತು ಪೊಲೀಸರು ಹಲವಾರು ಬಾರಿ ಸ್ಥಳಕ್ಕೆ ಭೇಟಿ ನೀಡಿ ತೆರವುಗೊಳಿಸಲು ಮುಂದಾದಾಗ ಸಾರ್ವಜನಿಕರು ಅವಕಾಶ ನೀಡಿಲ್ಲ. ಆದರೂ ತನ್ನ ಪ್ರಯತ್ನವನ್ನು ಬಿಡದೆ ಪ್ರಿಸಿಲ್ಲಾ ಫೆರ್ನಾಂಡಿಸ್ ಅವರು ದೂರು ನೀಡುತ್ತಲೇ ಬಂದಿದ್ದಾರೆ. ಈ ಬಾರಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ದೂರು ನೀಡಿ ತರಕಾರಿ ಮತ್ತು ಹಣ್ಣಿನ ಅಂಗಡಿಯನ್ನು ತೆರವುಗೊಳಿಸಲು ಗ್ರಾಮ ಪಂಚಾಯಿತಿಯಿಂದ ನೋಟಿಸ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.

ಸ್ಥಳೀಯರು ಮಾತ್ರ ತೆರವುಗೊಳಿಸಲು ಅವಕಾಶ ನೀಡಲಿಲ್ಲ. ಸ್ಥಳಕ್ಕೆ ಭೇಟಿ ನೀಡಿದ್ದ ತಾಪಂ ಇಒ ದಯಾವತಿ ಅವರು ಸ್ಥಳೀಯರ ಮನವೊಲಿಸಿ ಅಂಗಡಿ ತೆರವುಗೊಳಿಸಲು ಪ್ರಯತ್ನಿಸಿದ್ದಾರೆ. ಸ್ಥಳೀಯರು ಅವಕಾಶ ನೀಡದಿದ್ದರಿಂದ ಇನ್ನೊಮ್ಮೆ ದೂರು ಬರದಂತೆ ನೋಡಿಕೊಳ್ಳಿ ಇಲ್ಲವಾದರೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿ ವಾಪಸಾಗಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಜಾಗದ ಮಾಲೀಕ ವಿಲಿಯಂ ಫೆರ್ನಾಂಡಿಸ್ ನನ್ನ ಸಹೋದರಿ ನನಗೆ ಇನ್ನಿಲ್ಲದ ತೊಂದರೆ ನೀಡುತ್ತಿದ್ದಾರೆ. ನನ್ನ ತೋಟದಲ್ಲಿ 75 ಅಡಿಕೆ ಮರವನ್ನು ಕತ್ತರಿಸುವಂತೆ ಮಾಡಿದ್ದಾರೆ. ನಾನು 30 ಜಾನುವಾರು ಸಾಕಿದ್ದೇನೆ. ಅದನ್ನು ಸಾಕಲು ಬಿಡುತ್ತಿಲ್ಲ. ನನ್ನ ಮೇಲೆ ಆಗಾಗ ದೂರು ನೀಡುತ್ತಿದ್ದಾರೆ. ತರಕಾರಿ ಅಂಗಡಿಯಿಂದ ಯಾರಿಗೂ ತೊಂದರೆಯಿಲ್ಲ. ಅಧಿಕಾರಿಗಳು ಮಾತ್ರ ನನ್ನ ಸಹೋದರಿಯ ಮಾತು ಕೇಳಿ ನೋಟಿಸ್ ನೀಡುವುದು. ಆಗಾಗ ಭೇಟಿ ನೀಡಿ ತೆರವುಗೊಳಿಸಲು ಮುಂದಾಗುವುದು ಮಾಡುತ್ತಿದ್ದಾರೆ. ಇದು ಸರಿಯಲ್ಲ. ನನಗೆ ತೊಂದರೆ ನೀಡಬೇಡಿ ಎಂದು ಅಂಗಲಾಚಿದರು.ರೀಯಾಯಿತಿ ದರದಲ್ಲಿ ತರಕಾರಿ ವ್ಯಾಪಾರ ಮಾಡುತ್ತಿರುವ ಯುಸೂಫ್ ಅವರ ಅಂಗಡಿಯನ್ನು ತೆರವು ಮಾಡದಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಹಳೆಮೂಡಿಗೆರೆ ಗ್ರಾಪಂ ಮಾಜಿ ಅಧ್ಯಕ್ಷ ಎಲ್.ಬಿ.ರಮೇಶ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಗಡಿಯಿಂದ ತರಕಾರಿ ಅಂಗಡಿ ಹೊರಭಾಗದ ವಿಲಿಯಂ ಫೆರ್ನಾಂಡಿಸ್ ಅವರ ಸ್ವಂತ ಜಾಗದಲ್ಲಿದೆ. ಹಿಂದೆ ನಾಲ್ಕೈದು ಬಾರಿ ಅಂಗಡಿ ತೆರಗೊಳಿಸಲು ಅಧಿಕಾರಿಗಳು ಮುಂದಾದಾಗ, ತೆರವುಗೊಳಿಸುವುದು ಬೇಡ ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾಗುವ ವೇಳೆ ಅಂಗಡಿಯನ್ನು ತೆರವುಗೊಳಿಸುತ್ತೇವೆ ಎಂದು ಹೇಳಿದ್ದೆವು ಆದರೂ ಅಧಿಕಾರಿಗಳು ಪದೇ ಪದೇ ತೊಂದರೆ ನೀಡುತ್ತಿದ್ದಾರೆ. ಬಡವ್ಯಾಪಾರಿಗಳಿಗೆ ತೊಂದರೆ ನೀಡಬಾರದು. ತರಕಾರಿ ಅಂಗಡಿಯಿಂದ ಬಡವರಿಗೆ ಕಡಿಮೆ ಬೆಲೆಯಲ್ಲಿ ತರಕಾರಿ ಸಿಗುತ್ತಿದೆ. ಇದನ್ನು ಅಧಿಕಾರಿಗಳು ಸಹಿಸುತ್ತಿಲ್ಲ. ತರಕಾರಿ ಅಂಗಡಿ ತೆರವುಗೊಳಿಸಲು ಮುಂದಾದರೆ ಗ್ರಾಪಂ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಮಾಜಿ ಗ್ರಾಪಂ ಸದಸ್ಯರಾದ ಜ್ಯೋತಿ, ಜಾನಕಿ, ತಾಲೂಕು ಕರವೇ ಅಧ್ಯಕ್ಷ ವಿನೋದ್ ಕುಮಾರ್, ಮುಖಂಡರಾದ ಎಂ.ಆರ್.ಜಗದೀಶ್ ಗೌಡ, ಯಾಕೂಬ್ ಗೋಣಿಗದ್ದೆ, ಜಗದೀಶ್, ಶ್ರೀಕಾಂತ್, ಲಕ್ಷ್ಮಣ್ ಪೂಜಾರಿ, ಕಿಟ್ಟು ಪೂಜಾರಿ, ನಂಜುಂಡ, ಜ್ಯೋತಿ, ಲಕ್ಷ್ಮಣ್ ಪೂಜಾರಿ ಸೇರಿದಂತೆ ಇತರರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments