Wednesday, August 26, 2026
Homeಜಿಲ್ಲಾಸುದ್ದಿಮಲೆನಾಡಿನ ಭಾಗದ ರೈತರ ಬಾಳಿನ ಮೇಲೆ ತೂಗುಗತ್ತಿಯಾದ ಕಸ್ತೂರಿ ರಂಗನ್ ವರದಿ : ಹಿಂಪಡೆಯುವಂತೆ ಆಗ್ರಹ

ಮಲೆನಾಡಿನ ಭಾಗದ ರೈತರ ಬಾಳಿನ ಮೇಲೆ ತೂಗುಗತ್ತಿಯಾದ ಕಸ್ತೂರಿ ರಂಗನ್ ವರದಿ : ಹಿಂಪಡೆಯುವಂತೆ ಆಗ್ರಹ

Telegram Group
Join Now

ಮೂಡಿಗೆರೆ:ಮಲೆನಾಡಿನ ಭಾಗದ ರೈತರ ಬಾಳಿನ ಮೇಲೆ ತೂಗುಗತ್ತಿಯಾದ ಕಸ್ತೂರಿ ರಂಗನ್ ವರದಿ ಹಿಂಪಡೆಯುವಂತೆ ಸುಂಕಸಾಲೆ ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ

ರಾಣಿ ಜರಿ ಕಾಫಿ ಎಸ್ಟೇಟ್ ಮುಂಭಾಗದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಸುಮಾರು ಮೂರು ಕಿಲೋಮೀಟರ್ ಪಾದಯಾತ್ರೆ ಸುಂಕಸಾಲೆ ಗ್ರಾಮ ಪಂಚಾಯಿತಿ ಆವರಣದವರೆಗೂ ಸಾಗಿತು.

ನಂತರ ಗ್ರಾಮ ಪಂಚಾಯಿತಿ ಆವರಣದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಮಹೇಶ್ ದುರ್ಗದಹಳ್ಳಿ ಕಸ್ತೂರಿ ರಂಗನ್ ವರದಿಯಿಂದ ಸ್ಥಳೀಯ ಗ್ರಾಮಸ್ಥರು, ರೈತರು ಹಾಗೂ ಜನಸಾಮಾನ್ಯರಿಗೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ವಿವರಿಸಿದರು.ವರದಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಸ್ಥಳೀಯರ ಆತಂಕಗಳನ್ನು ಸರ್ಕಾರದ ಗಮನಕ್ಕೆ ತರುವುದು ಪ್ರತಿಭಟನೆಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.ಸರ್ಕಾರಗಳು ರೈತರ ಕಷ್ಟಕ್ಕೆ ನಿಲ್ಲಬೇಕು ಆದರೆ ರೈತರ ನೆರವಿಗೆ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಮಾಜಿಕಹೋರಾಟಗಾರ ವಿಜಯ್ ಕುಮಾರ್ ಮಾತನಾಡಿ ಕಳೆದ ಜು.27ರಂದು ಕರಡು ಅಧಿಸೂಚನೆಯನ್ನು ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವಾಲಯ ಪ್ರಕಟಿಸಿರುವುದು ಮಲೆನಾಡಿನ ರೈತರಿಗೆ ಮರಣ ಶಾಸನ ಬರೆದಂತಾಗಿದೆ ಎಂದು ಕಿಡಿಕಾರಿದರು.

ಈ ಸೂಚನೆ ಜಾರಿಗೊಂಡಲ್ಲಿ ಘೋಷಿತ ಗ್ರಾಮಗಳ ಜನರಿಗೆ ಸಾಕಷ್ಟು ತೊಂದರೆಯಾಗಲಿದೆ. ಈ ಅಧಿಸೂಚನೆ ಕೇವಲ ಅಧಿಕಾರಿ ಮಟ್ಟದ ಚರ್ಚೆ, ತೀರ್ಮಾನಗಳಾಗಿವೆ. ಉದ್ದೇಶಿತ ಸೂಕ್ಷ್ಮ ವಲಯದ ಗ್ರಾಮಗಳ ಗ್ರಾಮ ಸಭೆಯನ್ನು ಕರೆದು ಸ್ಥಳೀಯ ಜನರ ವಿಶ್ವಾಸದೊಂದಿಗೆ ಸಾಧಕ-ಬಾಧಕಗಳ ಚರ್ಚೆ ಮಾಡದೆ ಪರಿಸರ ಸೂಕ್ಷ್ಮ ವಲಯದಲ್ಲಿ ಸೇರಿಸಲಾಗಿದೆ ಎಂದು ಆರೋಪಿಸಿದರು.

ಕಾಫಿ ಬೆಳೆಗಾರರ ಒಕ್ಕೂಟದ ಜಯರಾಮ್ ಗೌಡ ಮಾತನಾಡಿ ಮಲೆನಾಡಿನ ರೈತರಿಗೆ ಮರಣ ಶಾಸನವಗಿರುವ ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದ ಅವರು, ಈ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟಗಳ ರೈತರು, ಗ್ರಾಮಸ್ಥರು, ಸಹಕಾರಿ ಸಂಘ ಸಂಸ್ಥೆಗಳು ವರದಿಯ ಜಾರಿ ವಿರೋಧಿಸಿ ಆಕ್ಷೇಪಣೆಯನ್ನು ಸಲ್ಲಿಸುವ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದೇವೆ ಎಂದರು.

ಕಸ್ತೂರಿ ರಂಗನ್ ವರದಿ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಆದಾಗಿನಿಂದಲೂ ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಮಲೆನಾಡಿನ ಭಾಗದ ರೈತರ ಬಾಳಿನ ಮೇಲೆ ತೂಗುಗತ್ತಿಯಾಗಿ ಪರಿಣಮಿಸಿದೆ. 2013ರಿಂದಲೂ ಕೇಂದ್ರ ಸರ್ಕಾರ ಅನೇಕ ಬಾರಿ ಈ ವರದಿ ಜಾರಿಗೆ ಸಂಬಂಧಿಸಿದಂತೆ ಅನೇಕ ಬಾರಿ ತಿದ್ದುಪಡಿ ಮಾಡುತ್ತಲೇ ಬಂದಿದೆ. ಆದರೆ ಅವು ಈ ಭಾಗದ ರೈತರ ನೆರವಿಗೆ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಚಟುವಟಿಕೆಗಳ ಮೇಲೆ ನಿರ್ಬಂಧ, ರಾಸಾಯನಿಕ ಗೊಬ್ಬರಗಳ ಉಪಯೋಗಗಳ ನಿರ್ಬಂಧ, ಕಡ್ಡಾಯ ಸಾವಯವ ಕೃಷಿ ಪದ್ಧತಿ ಹೇರಿಕೆ, ಯಂತ್ರೋಪಕರಣಗಳ ನಿಷೇಧ ಇತ್ಯಾದಿ ನಿರ್ಬಂಧಗಳನ್ನು ರೈತರು ಒಪ್ಪಲು ಸಾಧ್ಯವೇ ಇಲ್ಲ. ಅರಣ್ಯ ಮತ್ತು ಸೂಕ್ಷ್ಮವಲಯದಿಂದ ಕಾಡುಪ್ರಾಣಿಗಳು ಕೃಷಿ ಭೂಮಿ ಮತ್ತು ಜನವಸತಿ ಪ್ರದೇಶಗಳಿಗೆ ದಾಳಿ ಇಡದಂತೆ ತಡೆ -ನಿರ್ಬಂಧ ಗೋಡೆ ನಿರ್ಮಾಣ ಮಾಡಬೇಕು. ಆ ಮೂಲಕ ಈ ಭಾಗದ ಗ್ರಾಮೀಣ ಜನತೆಯ ಕೃಷಿ ಚಟುವಟಿಕೆ ಅಭಿವೃದ್ಧಿ, ಮೂಲಕ ಸೌಕರ್ಯಗಳ ಅಭಿವೃದ್ಧಿಗೆ ಯಾವ ಬಾಧಕಗಳೂ ಆಗದಂತೆ ಸ್ಥಳೀಯರ ಒಳಗೊಳ್ಳುವಿಕೆ ಮುಖಾಂತರವೇ ಪಶ್ಚಿಮಘಟ್ಟಗಳ ರಕ್ಷಣೆ ಸಾಧ್ಯ ಎಂಬುದನ್ನು ಸರ್ಕಾರಗಳು ಮನವರಿಕೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಮುಂದಿನ ದಿನಗಳಲ್ಲಿ ಸರ್ಕಾರಗಳು ಎಚ್ಚೇತ್ತು ರೈತರ ಪರ ಕೆಲಸ ಮಾಡದೆ ಇದ್ದಲ್ಲಿ ಮತ್ತಷ್ಟು ಬೃಹತ್ ಪ್ರತಿಭಟನೆ ಗಳು,ಪಾದಯಾತ್ರೆಗಳು ನಡೆಯಲಿವೆ ಎಂದು ಎಚ್ಚರಿಕೆ ನೀಡಿದರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಶೋಕ್ ರೈತರು ಈ ವರದಿಯನ್ನು ಯಾವ ಕಾರಣಕ್ಕಾಗಿ ವಿರೋಧಿಸಲಾಗುತ್ತಿದೆ ಎಂಬುದರ ಬಗ್ಗೆ ಸರ್ಕಾರಕ್ಕೆ ಅರಿವು ಇರಬೇಕು ಇಂತಹ ವರದಿಗಳಿಂದ ರೈತರ ಹೊಟ್ಟೆಗೆ ಹೊಡೆಯಲಾಗುತ್ತಿದೆ, ಕೂಡಲೆ ವರದಿ ಹಿಂಪಡೆದು ರೈತರ ಸುಷ್ಠಿತ ಬದುಕಿಗೆ ಸಹಕರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಗೆ ಬೆಂಬಲ ಸೂಚಿಸಿದ ಸ್ಥಳೀಯ ವರ್ತಕರು ತಮ್ಮ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಸಹಕಾರ ನೀಡಿದರು.

ಈ ಸಂದರ್ಭದಲ್ಲಿ ಪ್ರವೀಣ್ ಎಂ.ಜಿ., ರವಿ ಬಾಳಿಗೆ, ಈಶ್ವರ್ ಗೌಡ, ನೇತ್ರ ರತ್ನಾಕರ್, ಕೃಷ್ಣೇಗೌಡ ಭರತ್ ಸುಂಕಸಾಲೆ, ಶರತ್, ಅಜಿತ್ ದುರ್ಗದಹಳ್ಳಿ, ಗಾಯತ್ರಿ, ಸುಮಾ. ಪ್ರೇಮ ಹರೀಶ್ ಆಟೋ ಚಾಲಕರ ಸಂಘದ ಪದಾಧಿಕಾರಿಗಳು, ಸ್ತ್ರೀ ಶಕ್ತಿ ಸಂಘಸೇರಿದಂತೆ ಸುಂಕಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಭಾಗವಹಿಸಿದ್ದರು.

ವರದಿ:ಪುನೀತ್ ಕಡಿದಾಳು
9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments