ಚಿಕ್ಕಮಗಳೂರು: ಟಿಪ್ಪು ನಗರದಲ್ಲಿ ಈದ್ ಮಿಲಾದ್ ಹಿನ್ನೆಲೆಯಲ್ಲಿ ಅಳವಡಿಸಲಾಗಿರುವ 40 ಅಡಿಯ ಟಿಪ್ಪು ಸುಲ್ತಾನ್ ಕಟೌಟ್ ಹಾಗೂ ಪಾಕಿಸ್ತಾನ ಪರ ಸಾಲುಗಳಿದ್ದ ಹಾಡನ್ನು ಬಳಸಿ ವಿಡಿಯೋ ವೈರಲ್ ಮಾಡಿರುವುದನ್ನು ಖಂಡಿಸಿ ಹಿಂದೂ ಸಂಘಟನೆಗಳು ಕರೆ ನೀಡಿದ್ದ ಪ್ರತಿಭಟನೆ ಮತ್ತು ‘ತಿರಂಗಾಯಾತ್ರೆ’ಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ.
ಅನುಮತಿ ನಿರಾಕರಣೆಯ ನಡುವೆಯೂ ಬಜರಂಗದಳ, ವಿಶ್ವ ಹಿಂದೂ ಪರಿಷತ್ (VHP) ಹಾಗೂ ಬಿಜೆಪಿ ನಾಯಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದ್ದು, ನಗರದಲ್ಲಿ ತೀವ್ರ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ‘ಹಿಂದೂ ಹಿತ ರಕ್ಷಣಾ ವೇದಿಕೆ’ ಮುಖಂಡರು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ಮತ್ತು ತಿರಂಗಾಯಾತ್ರೆ ನಡೆಸಲು ಅನುಮತಿ ಕೋರಿದ್ದರು. ನಗರ ತಾಲೂಕು ಕಚೇರಿಯಿಂದ ಎಂ.ಜಿ. ರಸ್ತೆ ಮೂಲಕ ಆಜಾದ್ ಪಾರ್ಕ್ ವರೆಗೆ ಯಾತ್ರೆ ನಡೆಸಲು ಯೋಜನೆ ರೂಪಿಸಲಾಗಿತ್ತು.
ಈದ್ ಮಿಲಾದ್ ಹಬ್ಬ ಮತ್ತು ಮೆರವಣಿಗೆಯ ಹಿನ್ನೆಲೆಯಲ್ಲಿ ನಗರದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸ್ ಇಲಾಖೆಯು ಈ ಯಾತ್ರೆಗೆ ಅನುಮತಿ ನೀಡಲು ನಿರಾಕರಿಸಿದೆ.
