ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ಧಾರಾಕಾರ ಮಳೆ ಹಾಗೂ ಬಿರುಸಿನ ಗಾಳಿಗೆ ತಾಲೂಕಿನಾದ್ಯಂತ 60ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ, ಮೂಡಿಗೆರೆ ಪಟ್ಟಣ ಹೊರತುಪಡಿಸಿ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

ಭಾರೀ ಗಾಳಿ-ಮಳೆಯ ಅಬ್ಬರಕ್ಕೆ ನೂರಾರು ಮರಗಳು ನೆಲಸಮವಾಗಿದ್ದು, ರಸ್ತೆ ಸಂಚಾರಕ್ಕೂ ತೀವ್ರ ಅಡಚಣೆ ಉಂಟಾಗಿದೆ. ವಿಶೇಷವಾಗಿ ಬಣಕಲ್-ಮತ್ತಿಕಟ್ಟೆ ಮಾರ್ಗದಲ್ಲಿ ಅನೇಕ ಮರಗಳು ಮತ್ತು ವಿದ್ಯುತ್ ಕಂಬಗಳು ರಸ್ತೆಗೆ ಬಿದ್ದು, ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ.
ವಿದ್ಯುತ್ ಕಂಬಗಳು ಹಾಗೂ ಮರಗಳನ್ನು ತೆರವುಗೊಳಿಸಲು ಸ್ಥಳೀಯರು ಹರಸಾಹಸ ಪಡುತ್ತಿದ್ದಾರೆ. ರಸ್ತೆ ಸಂಪರ್ಕ ಇಲ್ಲದ ಕಾರಣ, ಯಂತ್ರೋಪಕರಣಗಳು ತಲುಪದ ಹಿನ್ನೆಲೆಯಲ್ಲಿ ಸ್ಥಳೀಯರೇ ಸ್ವಯಂಪ್ರೇರಿತವಾಗಿ ಕಾರ್ಯಾಚರಣೆಗೆ ಮುಂದಾಗಿರುವುದು ಗಮನಾರ್ಹ.
ಇನ್ನೊಂದೆಡೆ, ಬಿ.ಹೊಸಳ್ಳಿ ಗ್ರಾಮದಲ್ಲಿ ಗಾಳಿ-ಮಳೆ-ಸಿಡಿಲಿನ ಅಬ್ಬರಕ್ಕೆ ಗೌರಮ್ಮ ಎಂಬವರ ಮನೆ ಮೇಲೆ ತೆಂಗಿನ ಮರ ಬಿದ್ದಿದ್ದು, ಮನೆಯಲ್ಲಿ ಇದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಒಟ್ಟಾರೆ ಒಂದೇ ರಾತ್ರಿ ಸುರಿದ ಭಾರೀ ಮಳೆಯ ಅಬ್ಬರಕ್ಕೆ ಮೂಡಿಗೆರೆ ತಾಲೂಕು ಅಕ್ಷರಶಃ ಕಂಗಾಲಾಗಿದ್ದು, ಸಾಮಾನ್ಯ ಜೀವನ ಪುನಃ ಸ್ಥಿತಿಗೆ ಬರಲು ಇನ್ನೂ ಕೆಲವು ದಿನಗಳು ಹಿಡಿಯುವ ಸಾಧ್ಯತೆ ಇದೆ.
