ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇನ್ನೂ ಅಧಿಕೃತವಾಗಿ ಮಳೆಗಾಲ ಪ್ರಾರಂಭವಾಗಿಲ್ಲ. ರೈತರು ಜಮೀನುಗಳ ಉಳುಮೆ ಹಾಗೂ ಬಿತ್ತನೆ ಕಾರ್ಯ ಪ್ರಾರಂಭಿಸಿಲ್ಲ. ಆದರೆ ಮುಂದೆ ರಸಗೊಬ್ಬರ ಸಿಗುವುದಿಲ್ಲವೇನೋ ಎಂಬ ಸ್ವ ಕಲ್ಪಿತ ಆತಂಕದಿಂದ ಮುಂಗಡವಾಗಿಯೇ ರಸಗೊಬ್ಬರಗಳನ್ನು ಖರೀದಿಸಿ ತಮ್ಮ ತಮ್ಮ ಮನೆ ಹಾಗೂ ತೋಟದ ಮನೆಗಳಲ್ಲಿ ದಾಸ್ತಾನಿಡಲು ಮುಂದಾಗಿದ್ದು ರಸಗೊಬ್ಬರ ಮಾರಾಟಗಾರರು ಇದರ ಲಾಭ ಪಡೆದು ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರಗಳಲ್ಲಿ ರಸಗೊಬ್ಬರ ಮಾರಾಟ ಮಾಡಲು ರೈತರೇ ಪರೋಕ್ಷವಾಗಿ ಅವಕಾಶ ಸೃಷ್ಟಿ ಮಾಡಿಕೊಟ್ಟಂತೆ ಆಗುತ್ತದೆ.

ಜಿಲ್ಲೆಯಲ್ಲಿ ಸಾಕಷ್ಟು ರಸಗೊಬ್ಬರ ದಾಸ್ತಾನಿದ್ದು ರೈತರು ಆತಂಕ ಪಡುವ ಅಗತ್ಯ ಇರುವುದಿಲ್ಲ. ಎಂದು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ತಿರುಮಲೇಶ್ ಪಬ್ಲಿಕ್ ಇಂಪ್ಯಾಕ್ಟ್ ಗೆ ತಿಳಿಸಿದ್ದಾರೆ
ರೈತರು ಅವಧಿಗಿಂತ ಮುಂಚೆ ಅನಗತ್ಯವಾಗಿ ಹಾಗೂ ಅಗತ್ಯ ಪ್ರಮಾಣಕ್ಕಿಂತ ಅಧಿಕವಾಗಿ ರಸಗೊಬ್ಬರಗಳ ಖರೀದಿ ಮತ್ತು ದಾಸ್ತಾನು ಮಾಡುವ ಅನಿವಾರ್ಯತೆ ಇಲ್ಲ.
ನೈಜವಾಗಿ ಕೃಷಿ ಚಟುವಟಿಕೆಗಳು ಪ್ರಾರಂಭಗೊಂಡಾಗ ಭೂಮಿಯ ಪ್ರಮಾಣ, ಬೆಳೆಯ ವಿಧ ಹಾಗೂ ಶಿಫಾರಸ್ಸು ಪ್ರಮಾಣಗಳಿಗೆ ತಕ್ಕಂತೆ ರಸಗೊಬ್ಬರಗಳನ್ನು ಖರೀದಿಸಿ ಎಂದು ರೈತರಲ್ಲಿ ಮನವಿ ಮಾಡಿದ್ದಾರೆ
