ಮೂಡಿಗೆರೆ: ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಶಾಸಕಿ ನಯನಾ ಮೋಟಮ್ಮ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು.
ಸಭೆಯಲ್ಲಿ ವೈದ್ಯರ ಸಮಸ್ಯೆ, ಕುಡಿಯುವ ನೀರು, ವಿದ್ಯುತ್, ಬೆಳೆ ಮಾಪನ ಕೇಂದ್ರ, ಕಸ ವಿಲೇವಾರಿ ಸೇರಿದಂತೆ ಅನೇಕ ವಿಚಾರದ ಬಗ್ಗೆ ಗಂಭೀರ ಚರ್ಚೆ ನಡೆಯಿತು.
ಆರಂಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಅನುಪಾಲನೆ ವರದಿ ಹಾಗೂ ಇಲಾಖೆಯಲ್ಲಿ ನಡೆದ ಪ್ರಗತಿ ಬಗ್ಗೆ ವರದಿ ನೀಡಿದರು. ನಂತರ ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಎಂಜಿಎಂ ಆಸ್ಪತ್ರೆಯಲ್ಲಿ ಅರವಳಿಕೆ ವೈದ್ಯರ ನೇಮಕ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಕಾದ 4 ವೈದ್ಯರ ನೇಮಕ ಮಾಡುವಂತೆ ಆರೋಗ್ಯ ಸಚಿವ ಯು.ಟಿ.ಖಾದರ್ ಬಳಿ ಮಾತನಾಡುತ್ತೇನೆ. ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ಅನೇಕ ರಸ್ತೆ ಬದಿಯಲ್ಲಿ ಜನರು ಕಸ ಹಾಕುತ್ತಿದ್ದಾರೆ. ಇದನ್ನು ಬಗೆಹರಿಸಲು ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಾಗಾಗಿ ಪ.ಪಂ ಹಾಗೂ ಎಲ್ಲಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಕಸ ನಿಯಂತ್ರಣಕ್ಕೆ ಕ್ರಮ ವಹಿಸಬೇಕು. ನಂತರವೂ ಜನರು ಕಸ ಹಾಕಿದರೆ ಮುಲಾಜಿಲ್ಲದೇ ಅವರಿಗೆ ದಂಢ ವಿಧಿಸಬೇಕೆಂದು ತಾ.ಪಂ. ಇಒ ದಯಾವತಿ ಅವರಿಗೆ ಸೂಚನೆ ನೀಡಿದರು.
ತಾನು ಶಾಸಕಿಯಾದ ಬಳಿಕ ಕೆಲವೊಂದು ಸಮಸ್ಯೆಗಳು ಅಧಿಕಾರಿಗಳ ಗಮನಕ್ಕೆ ಬಂದರೂ ಬಗೆಹರಿಸುತ್ತಿಲ್ಲ. ತಾನು ಹೇಳುವವರೆಗೆ ಹಾಗೂ ಮಾಧ್ಯಮದಲ್ಲಿ ತನ್ನ ವಿರುದ್ಧ ಸುದ್ದಿ ಬಂದ ಬಳಿಕ ಕೆಲಸ ಮಾಡಲು ಮುಂದಾಗುತ್ತಿರುವ ಕ್ರಮವನ್ನು ಸಹಿಸುವುದಿಲ್ಲ. ಜನರ ಆರೋಗ್ಯ ಹಾಗೂ ಜೀವಕ್ಕೆ ಕುತ್ತು ಬರುವಂತಹ ತುರ್ತು ಪರಿಸ್ಥಿತಿ ಎದುರಾದಾಗ ನಿಯಮಗಳು ಅಡ್ಡಿ ಬಂದರೂ ಕೂಡ ಮೊದಲು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಬೇಕು. ಈಗ ಮಳೆ ಪ್ರಾರಂಭಗೊಂಡಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಂತರ್ಜಲ ಮಟ್ಟ ಕಾಪಾಡಲು ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ತಾಲೂಕಿನಲ್ಲಿ 16 ಮಳೆ ಮಾಪನ ಕೇಂದ್ರ ಕೆಲಸ ಮಾಡುತ್ತಿಲ್ಲ. ಅದನ್ನು ಮಳೆ ಪ್ರಾರಂಭವಾದ ಮೇಲೆ 15 ದಿನದಲ್ಲಿ ಸರಿಪಡಿಸಲು ಮುಂದಾದರೆ, ಅಲ್ಲಿಯವರೆಗೆ ಮಳೆ ಪ್ರಮಾಣದ ಲೆಕ್ಕ ಸಿಗುವುದಿಲ್ಲ. ಇದರಿಂದ ವಿಮೆ ಕಟ್ಟಿದ ರೈತರಿಗೆ ಪರಿಹಾರ ಹೇಗೆ ಕೊಡಲು ಸಾಧ್ಯವಿದೆ? ಕೂಡಲೇ ಈ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಬೇಕು. ಈಗಾಗಲೇ ಮಳೆ ಪ್ರಾರಂಭವಾಗಿದೆ. ಸಮಸ್ಯೆಗಳು ಉದ್ಭವಗೊಳ್ಳಲಾರಂಭಿಸುತ್ತದೆ. ತಾಲೂಕಿನ ಬಹುತೇಕ ಚರಂಡಿಗಳು ಮುಚ್ಚಿ ಹೋಗಿದ್ದು, ಮಳೆ ನೀರು ರಸ್ತೆ ಮೇಲೆ ಹರಿದು ರಸ್ತೆಗಳೆಲ್ಲಾ ಹಾಳಾಗುತ್ತಿದೆ. ಗುಡ್ಡಗಳು ಕುಸಿಯತ್ತವೆ. ಮರ, ವಿದ್ಯುತ್ ಕಂಬಗಳು ನೆಲಕ್ಕುರುಳುತ್ತದೆ. ಅದಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಮೂಡಿಗೆರೆ ತಹಸೀಲ್ದಾರ್ ಎಸ್.ಅಶ್ವಿನಿ, ಕಳಸ ತಹಸೀಲ್ದಾರ್ ಶಾರದ, ಮೂಡಿಗೆರೆ ಇಒ ದಯಾವತಿ, ಆಡಳಿತಾಧಿಕಾರಿ ಸಿ.ಎಂ.ಮಹೇಶ್, ಕಳಸ ಇಒ ಸುದೀಪ್, ಆಡಳಿತಾಧಿಕಾರಿ ಆನಂದ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
