ಸಕಲೇಶಪುರ: ಸಾರ್ವಜನಿಕರು ಹಾಗೂ ಪ್ರವಾಸಿಗರು ಎಸೆದು ಹೋಗಿರುವ ಪ್ಲಾಸ್ಟಿಕ್ ಬಾಟಲ್‌ಗಳು, ಗಾಜಿನ ಬಾಟಲ್‌ಗಳು ಸೇರಿದಂತೆ ರಸ್ತೆ ಬದಿಯ ವಿವಿಧ ತ್ಯಾಜ್ಯಗಳನ್ನು ಸಂಗ್ರಹಿಸಿ ಪರಿಸರ ಸ್ವಚ್ಛತೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಚಿಂದಿ ಆಯುವವರ ಕಾರ್ಯಕ್ಕೆ ಶಾಸಕ ಸಿಮೆಂಟ್ ಮಂಜು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಯಾಣದ ವೇಳೆ ಅವರನ್ನು ಗಮನಿಸಿದ ಶಾಸಕ ಸಿಮೆಂಟ್ ಮಂಜು ಅವರು ಕಾರಿನಿಂದ ಇಳಿದು ನೇರವಾಗಿ ಭೇಟಿ ನೀಡಿ, ಅವರ ಕೆಲಸದ ವಿಧಾನ, ತ್ಯಾಜ್ಯ ಸಂಗ್ರಹಣೆ ಪ್ರಕ್ರಿಯೆ, ಸಂಗ್ರಹಿಸಿದ ವಸ್ತುಗಳನ್ನು ವಿಂಗಡಿಸಿ ಮಾರಾಟ ಮಾಡುವ ಕ್ರಮ ಸೇರಿದಂತೆ ವಿವಿಧ ವಿಚಾರಗಳ ಕುರಿತು ಮಾಹಿತಿ ಪಡೆದುಕೊಂಡರು.
ಶಾಸಕರು ದಿಡೀರ್ ಆಗಿ ತಮ್ಮ ಬಳಿಗೆ ಬಂದು ಮಾತನಾಡಿದ್ದಕ್ಕೆ ಚಿಂದಿ ಆಯುವವರು ಆಶ್ಚರ್ಯ ಹಾಗೂ ಸಂತಸ ವ್ಯಕ್ತಪಡಿಸಿದರು.
ಸಮಾಜದ ತಳಮಟ್ಟದ ಜನರ ಬದುಕು, ಅವರ ಶ್ರಮ ಮತ್ತು ಸಮಾಜಕ್ಕೆ ಅವರು ನೀಡುತ್ತಿರುವ ಕೊಡುಗೆಯನ್ನು ಗುರುತಿಸಿ ಗೌರವಿಸುವ ಶಾಸಕ ಸಿಮೆಂಟ್ ಮಂಜು ಅವರ ಸರಳತೆ ಹಾಗೂ ಜನಸ್ನೇಹಿ ನಡೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಪರಿಸರ ಉಳಿಸುವ ಕೆಲಸ ದೊಡ್ಡದು-ಚಿಕ್ಕದು ಎನ್ನುವುದಿಲ್ಲ; ಪ್ರತಿಯೊಬ್ಬರ ಶ್ರಮಕ್ಕೂ ಗೌರವ ಇರಬೇಕು ಎಂದು ತಿಳಿಸಿದರು.
